×
Ad

ಯುವತಿಯ ಸಾವಿನ ನಂತರ ಎಚ್ಚೆತ್ತ ಪಿಡಬ್ಲ್ಯುಡಿ ಇಲಾಖೆ

Update: 2016-05-26 22:02 IST

ಶಿವಮೊಗ್ಗ, ಮೇ 26: ನಗರದ ಸಹ್ಯಾದ್ರಿ ನಗರ ಹಾಗೂ ಕೆಎಚ್‌ಬಿ ಪ್ರೆಸ್ ಕಾಲನಿಯ ಮೂಲಕ ಹಾದು ಹೋಗಿರುವ ಶಿವಮೊಗ್ಗ-ರಾಮನಗರ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ, ಗುರುವಾರ ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎ.ಇ.ಇ.) ಜಯಸಿಂಹ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇತ್ತೀಚೆಗೆ ಪ್ರೆಸ್ ಕಾಲನಿ ಸಮೀಪ ಟ್ಯ್ರಾಕ್ಟರ್ ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದ. ಇದರ ಬೆನ್ನಲ್ಲೆ ಇದೇ ರಸ್ತೆಯ ಸಹ್ಯಾದ್ರಿ ನಗರದ ಬಳಿ ಎರಡು ದಿನಗಳ ಹಿಂದೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಯುವತಿಯೋರ್ವಳು ಸ್ಥಳದಲ್ಲಿಯೇ ಅಸುನೀಗಿದ್ದಳು. ಇದರಿಂದ ರೊಚ್ಚಿಗೆದ್ದಿದ್ದ ನಾಗರಿಕರು ದಿಢೀರ್ ಪ್ರತಿಭಟನೆ ನಡೆಸಿದ್ದರು. ಅವ್ಯವಸ್ಥಿತವಾಗಿರುವ ರಸ್ತೆ ಸರಿಪಡಿಸುವಂತೆ, ಹಂಪ್ಸ್ ಹಾಕುವಂತೆ ಪಿಡಬ್ಲ್ಯುಡಿ ಇಲಾಖೆಗೆ ಆಗ್ರಹಿಸಿದ್ದರು. ನಾಗರಿಕರ ಆಕ್ರೋಶದಿಂದ ಎಚ್ಚೆತ್ತುಕೊಂಡಿರುವ ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ಇದೀಗ ಅಪಘಾತ ವಲಯವಾಗಿ ಪರಿಣಮಿಸಿರುವ ಸಹ್ಯಾದ್ರಿ ನಗರ ಹಾಗೂ ಕೆಎಚ್‌ಬಿ ಪ್ರೆಸ್ ಕಾಲನಿಯ ಬಳಿ ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ಪರಿಶೀಲನೆ ನಡೆಸಿದರು. ಈ ಎರಡು ಸೇತುವೆಗಳ ಬಳಿ ಕಾಲಮಿತಿಯಲ್ಲಿ ವೈಜ್ಞಾನಿಕವಾಗಿ ರಸ್ತೆ ಉಬ್ಬು (ಹಂಪ್ಸ್), ರಿಫ್ಲೆಕ್ಟರ್, ಸೂಚನಾ ಫಲಕ ಅಳವಡಿಸುವುದಾಗಿ ಎ.ಇ.ಇ. ಜಯಸಿಂಹ ನಿವಾಸಿಗಳಿಗೆ ಭರವಸೆ ನೀಡಿದರು. ಕೋಟ್ಯಂತರ ರೂ. ವೆಚ್ಚದಲ್ಲಿ ಎರಡು ಸೇತುವೆಗಳ ಪುನರ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಈ ಕುರಿತಂತೆ ಸಮಗ್ರ ಅಂದಾಜು ಪಟ್ಟಿ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಅನುಮತಿ ದೊರಕುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು ಎಂದು ಜಯಸಿಂಹರವರು ನಿವಾಸಿಗಳಿಗೆ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ. ಮನವಿ ಅರ್ಪಣೆ:

ಈ ವೇಳೆ ಕಾಂಗ್ರೆಸ್ ನಾಯಕ, ಜಿಲ್ಲಾ ಪತ್ರ ಬರಹಗಾರರ ಸಂಘದ ಮುಖಂಡ ಜಿ.ಎಂ.ಸುರೇಶ್‌ಬಾಬು ನೇತೃತ್ವದಲ್ಲಿ ನಿವಾಸಿಗಳು ಎ.ಇ.ಇ. ಜಯಸಿಂಹರವರಿಗೆ ಮನವಿ ಪತ್ರ ಅರ್ಪಿಸಿದರು. ಅವೈಜ್ಞ್ಞಾನಿಕ ರೀತಿಯಲ್ಲಿರುವ ರಸ್ತೆ ಹಾಗೂ ಶಿಥಿಲಾವಸ್ಥೆಯಲ್ಲಿರುವ ಸೇತುವೆ ದುರಸ್ತಿಗೆ ಒತ್ತಾಯಿಸಿದರು. ಸಮಸ್ಯೆ ಪರಿಹಾರವಾಗದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಶಿವಮೊಗ್ಗ-ರಾಮನಗರ ರಸ್ತೆಯ ನಗರ ವ್ಯಾಪ್ತಿಯಲ್ಲಿನ ರಸ್ತೆಯ ಅವ್ಯವಸ್ಥೆ ಸರಿಪಡಿಸಲು ಹಾಗೂ ಅಪಘಾತಗಳ ನಿಯಂತ್ರಣಕ್ಕೆ ಕಾಲಮಿತಿಯಲ್ಲಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಪಿಡಬ್ಲ್ಯುಡಿ ಎ.ಇ.ಇ. ಜಯಸಿಂಹರವರು ಭರವಸೆ ನೀಡಿದ್ದಾರೆ. ಒಂದು ವೇಳೆ ಕಾಲಮಿತಿಯಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಆಡಳಿತ ವರ್ಗ ಆಸ್ಪದ ನೀಡಬಾರದು. ಪ್ರಸ್ತುತ ನೀಡಿರುವ ಭರವಸೆಯಂತೆ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಕಾಂಗ್ರೆಸ್ ಮುಖಂಡ, ಜಿಲ್ಲಾ ಪತ್ರ ಬರಹಗಾರರ ಸಂಘದ ಮುಖಂಡ ಜಿ.ಎಂ.ಸುರೇಶ್‌ಬಾಬು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News