ಕಾಫಿ ವ್ಯಾಪಾರಿಯ ಕೊಲೆ: ನಿಧಿಗಾಗಿ ಹತ್ಯೆಗೈದ ಶಂಕೆ
ಮಡಿಕೇರಿ, ಮೇ 26: ನಾಪೋಕ್ಲುವಿನ ಚೇಲಾವರ ವ್ಯಾಪ್ತಿಯಲ್ಲಿ ಮೇ 24ರಂದು ನಾಪತ್ತೆಯಾಗಿದ್ದ ಕಾಫಿ ವ್ಯಾಪಾರಿ ಮುನೀರ್(36)ಎಂಬವರ ಮೃತ ದೇಹ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಡಂಗದ ನಿವಾಸಿ ಮುನೀರ್ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ನಿಧಿ ಶೋಧದ ಹಿನ್ನೆಲೆ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
ಶಂಕಿತ ಘಟನೆ: ಮುನೀರ್ ಅವರ ಸಹೋದರಿಯ ಪತಿ ಹಾಗೂ ಜೀಪು ಚಾಲಕ ಸಲಾಂ ಎಂಬವರು 4 ದಿನಗಳ ಹಿಂದೆ ಚೇಲಾವರಕ್ಕೆ ತೆರಳಿದ್ದಾಗ ಸಮೀಪದ ದೇವಸ್ಥಾನದ ರಸ್ತೆಯಲ್ಲಿ ಚಿನ್ನಾಭರಣಗಳು ಭೂಮಿಯಿಂದ ಮೇಲ್ಭಾಗಕ್ಕೆ ಬಂದಂತೆ ಗೋಚರಿಸಿತು ಎಂದು ಹೇಳಲಾಗಿದೆ. ಇದರಿಂದ ಭಯಭೀತನಾದ ಸಲಾಂ ಮನೆಗೆ ಹೋಗಿ ವಿಷಯವನ್ನು ತನ್ನ ಸಂಬಂಧಿ ಮುನೀರ್‌ಗೆ ತಿಳಿಸಿದ್ದಾನೆ.
ಮತ್ತೆ ಅವರಿಬ್ಬರು ಅದೇ ಸ್ಥಳಕ್ಕೆ ತೆರಳಿದ ಸಂದರ್ಭ ಕೂಡ ಹಳೆಯ ಅನುಭವವಾಗಿದ್ದು, ಅನಾರೋಗ್ಯ ಕಾಡಿದೆ. ಬಳಿಕ ಕೇರಳದ ಮಾಂತ್ರಿಕನನ್ನು ಸಂಪರ್ಕಿಸಿ ಆತನಿಂದ ಉಪಚಾರ ಮಾಡಿಸಿಕೊಳ್ಳಲಾಗಿದೆ. ಮೇ 24ರಂದು ಬೈಕ್‌ನಲ್ಲಿ ಮಂತ್ರವಾದಿ ಸಹಿತ ಮುನೀರ್ ಹಾಗೂ ಸಲಾಂ ನಿಧಿ ಗೋಚರಿಸಿದ್ದ ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ.
ನೂತನವಾಗಿ ನಿರ್ಮಿಸಿರುವ ಕಾಂಕ್ರಿಟ್ ರಸ್ತೆಯ ಕೊನೆಯಲ್ಲಿ ಬೈಕ್ ನಿಲ್ಲಿಸಿ ಮಾಂತ್ರಿಕ ಹಾಗೂ ಮುನೀರ್ ಮುಂದೆ ತೆರಳಿದ್ದಾರೆ. ಭಯದಿಂದ ಬರುವುದಿಲ್ಲವೆಂದು ಹೇಳಿದ ಸಲಾಂ ಸ್ವಲ್ಪದೂರದಲ್ಲಿಯೇ ಉಳಿದಿದ್ದಾರೆ. ಆದರೆ ಗಂಟೆಗಟ್ಟಲೆ ಕಾದರೂ ಮಾಂತ್ರಿಕ ಹಾಗೂ ಮುನೀರ್ ಬಾರದೆ ಇದ್ದಾಗ ಆತಂಕಗೊಂಡ ಸಲಾಂ ಕಡಂಗಕ್ಕೆ ವಾಪಾಸಾಗಿದ್ದಾನೆ.
ಮೇ 25ರಂದು ಬೆಳಗ್ಗೆ ಕಡಂಗದ ಯುವಕರು ತಂಡೋಪತಂಡವಾಗಿ ನೂರಾರು ಸಂಖ್ಯೆಯಲ್ಲಿ ಆ ಸ್ಥಳಕ್ಕೆ ತೆರಳಿ ಹುಡುಕಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಹೇಳಲಾಗಿದೆ.
ವಿಷಯ ತಿಳಿದ ನಾಪೋಕ್ಲು ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೂ ಕಾಣೆಯಾದವರ ಬಗ್ಗೆ ಮಾಹಿತಿ ಲಭಿಸಿಲ್ಲ. ಕಡಂಗ ಗ್ರಾಮದ ಯುವಕರು ಗುರುವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯ ಕೈಗೊಂಡಾಗ ಚೇಲಾವರ ಜಲಪಾತದ ಮೇಲ್ಭಾಗದಲ್ಲಿ ಕಡಿದಾದ ಸ್ಥಳದಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿದ್ದ ಮುನೀರ್ ಅವರ ಮೃತದೇಹ ಗೋಚರಿಸಿದೆ.
ಮೃತ ದೇಹದ ಮುಂಭಾಗದಲ್ಲಿ ತೆಂಗಿನ ಕಾಯಿ, ಅಗರಬತ್ತಿ ಪತ್ತೆಯಾಗಿದ್ದು, ನಿಧಿಗಾಗಿಯೇ ಈ ಕೃತ್ಯ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಕೃತ್ಯದಲ್ಲಿ ಕೇರಳದ ಮಂತ್ರವಾದಿ ಹಾಗೂ ಮತ್ತೋರ್ವನ ಕೈವಾಡವಿರುವ ಸಂಶಯವನ್ನು ಕಡಂಗ ಗ್ರಾಮಸ್ಥರು ವ್ಯಕ್ತಪಡಿಸಿದ್ದು, ಪೊಲೀಸ್ ತನಿಖೆಯಿಂದಷ್ಟೇ ನಿಜಾಂಶ ಹೊರ ಬರಬೇಕಿದೆ.
ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಕರೀಮ್ ರಾವುತರ್ ಭೇಟಿ ನೀಡಿದ್ದರು. ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಯಿತು.
ಪೊಲೀಸರು ಈ ನಿಗೂಢ ಕೊಲೆಯ ತನಿಖೆಯನ್ನು ಚುರುಕುಗೊಳಿಸಿದ್ದಾರೆ.