×
Ad

ಜೂನ್ 4ರ ಮುಷ್ಕರ: ಶಿವಮೊಗ್ಗ ಜಿಲ್ಲೆಯಲ್ಲೂ ನೂರಾರು ಪೊಲೀಸರಿಂದ ರಜೆ ಕೋರಿ ಮನವಿ!

Update: 2016-05-26 22:13 IST

ಶಿವಮೊಗ್ಗ, ಮೇ 26: ಪೊಲೀಸ್ ಇಲಾಖೆಯ ಇತಿಹಾಸದಲ್ಲಿಯೇ ಇದೇ ಪ್ರಪ್ರಥಮ ಬಾರಿಗೆ ಜೂನ್ 4 ರಂದು ರಾಜ್ಯಾದ್ಯಂತ ಪೊಲೀಸರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕವಾಗಿ ಕರ್ತವ್ಯಕ್ಕೆ ರಜೆ ಹಾಕುವ ಮೂಲಕ ಪರೋಕ್ಷವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ತಮ್ಮ ಮೇಲಾಧಿಕಾರಿಗೆ ಜೂನ್ 4 ರಂದು ರಜೆ ಕೋರಿ ಮನವಿ ಪತ್ರಗಳನ್ನು ಅರ್ಪಿಸುತ್ತಿದ್ದಾರೆ. ಇದಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿಯೂ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಜಿಲ್ಲೆಯ ನೂರಾರು ಪೊಲೀಸರು ರಜೆ ಕೋರಿ ಮನವಿ ಅರ್ಪಿಸುತ್ತಿರುವ ಮಾಹಿತಿಗಳೂ ತಿಳಿದು ಬಂದಿದೆ. ಹಲವು ಪೊಲೀಸ್ ಠಾಣೆಗಳಲ್ಲಿ ರಜೆ ಕೋರಿ ಮೇಲಾಧಿಕಾರಿಗೆ ಸಲ್ಲಿಸುತ್ತಿರುವ ಮನವಿಯ ಫೋಟೋಗಳು ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜೂನ್ 4 ರಂದು ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆ ನಡೆಸಲಿದ್ದೇವೆ. ಈಗಾಗಲೇ ಜಿಲ್ಲೆಯ ನೂರಾರು ಪೊಲೀಸರು ರಜೆ ಕೋರಿ ಮೇಲಾಧಿಕಾರಿಗೆ ಮನವಿ ಪತ್ರ ಅರ್ಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವುದು ನಿಶ್ಚಿತವಾಗಿದೆ. ಇನ್ನಾದರೂ ಸರಕಾರ ಪೊಲೀಸರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಕ್ರಮಕೈಗೊಳ್ಳಬೇಕು ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪೊಲೀಸರೊಬ್ಬರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯಲ್ಲಿ ಕೆಎಸ್‌ಆರ್‌ಪಿ, ಡಿಎಆರ್ ಹಾಗೂ ಸಿವಿಲ್ ಸೇರಿದಂತೆ ಸರಿಸುಮಾರು 2,500 ಕ್ಕೂ ಅಧಿಕ ಪೊಲೀಸರಿದ್ದಾರೆ. ಕೆಎಸ್‌ಆರ್‌ಪಿಯವರು ರಜೆ ಕೋರಿ ಮನವಿ ಸಲ್ಲಿಸಿದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಡಿಎಆರ್ ಹಾಗೂ ಸಿವಿಲ್ ಪೊಲೀಸರು ರಜೆ ಕೋರಿ ಮನವಿ ಸಲ್ಲಿಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಬೇಡಿಕೆಗಳೇನು?:

ವೇತನ ತಾರತಮ್ಯ ಪರಿಷ್ಕರಿಸಬೇಕು ಎಂಬುವುದು ಪೊಲೀಸರ ಪ್ರಮುಖ ಬೇಡಿಕೆಯಾಗಿದೆ. ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯ ಪೊಲೀಸರ ವೇತನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇತರ ರಾಜ್ಯಗಳಿಗೆ ಅನುಗುಣವಾಗಿ ವೇತನ ಪರಿಷ್ಕರಣೆ ಮಾಡಬೇಕು ಎಂದು ಪೊಲೀಸರ ಆಗ್ರಹವಾಗಿದೆ. ಸಿಬ್ಬಂದಿ ಕೊರತೆ ಸರಿದೂಗಿಸಬೇಕು. ಕರ್ತವ್ಯ ಒತ್ತಡದಿಂದ ಮುಕ್ತಿ ನೀಡಬೇಕು. ಹೆಚ್ಚುವರಿ ಕೆಲಸ ನಿರ್ವಹಿಸಿದಾಗ ಹೆಚ್ಚಿನ ವೇತನ ನೀಡಬೇಕು. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು. ಇಲಾಖೆಯನ್ನು ರಾಜಕೀಯ ಒತ್ತಡ, ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪೊಲೀಸರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News