×
Ad

ಕ್ಯಾಲಿಫೋರ್ನಿಯಾ ಬಾರ್ ಪರೀಕ್ಷೆ: ಸಾಧನೆ ಮೆರೆದ ಭಟ್ಕಳದ ಖದೀಜಾ

Update: 2016-05-26 22:13 IST

ಭಟ್ಕಳ, ಮೇ 26: ಸಾಮಾನ್ಯವಾಗಿ ತೇರ್ಗಡೆ ಯಾಗಲು ಅತೀ ಕಷ್ಟ ಎಂದೇ ಬಿಂಬಿತವಾಗಿರುವ ಕ್ಯಾಲಿಫೋರ್ನಿಯಾ ಬಾರ್ ಎಕ್ಸಾಂ ನಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಭಟ್ಕಳ ಮೂಲದ ಖದೀಜಾ ಸಲೀಂ ಕೋಲಾ ರವರು ತೇರ್ಗಡೆ ಹೊಂದಿದ್ದು ನಾಡಿಗೆ ಕೀರ್ತಿ ತಂದಿದ್ದಾರೆ. ಈ ಸಾಧನೆ ಮಾಡಿದ ಈಕೆ ಭಟ್ಕಳದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಈ ಯಶಸ್ಸಿನ ಬಳಿಕ ಅವರು ಕ್ಯಾಲಿಫೋರ್ನಿಯಾದ ಯಾವುದೇ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಲು ಅರ್ಹತೆ ಪಡೆದಿದ್ದಾರೆ.

ವಿಶ್ವದ ಅತ್ಯಂತ ಕಷ್ಟಕರ ಎಂದೇ ಪರಿಗಣಿತ ವಾಗಿರುವ ಈ ಪರೀಕ್ಷೆಯಲ್ಲಿ 2015 ರಲ್ಲಿ ಕೇವಲ ಶೇ. 46.6 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಆದರೆ ಅವರೆಲ್ಲಾ ಅಲ್ಲಿನ ಸ್ಥಳೀಯರು ಎಂಬುದು ಗಮನಾರ್ಹ. ಇತರ ದೇಶಗಳ ನಾಗರಿಕರಿಗೆ ಇದು ಕಬ್ಬಿಣದ ಕಡಲೆ ಯೇ ಸರಿ.

 ಮಂಗಳೂರಿನ ಬಲ್ಮಠದ ಜವಳಿ ಅಂಗಡಿಯೊಂದರ ಮಾಲಕರಾಗಿರುವ ಸಲೀಂ ಕೋಲಾರವರ ಪುತ್ರಿಯಾ ಗಿರುವ ಈಕೆ, ಹದಿನಾಲ್ಕು ವರ್ಷಗಳ ಹಿಂದೆಯೇ ತಾಯಿಯನ್ನು ಕಳೆದು ಕೊಂಡಿದ್ದರು. ಈಕೆಗೆ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರನಿದ್ದಾನೆ. ಈ ಮೊದಲು ಮುಂಬೈ ವಿವಿಯಲ್ಲಿ ಎಲ್‌ಎಲ್ ಎಂ ಪದವಿಯಲ್ಲಿ ಖದೀಜಾ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ಇವರು ಮೂಡಬಿದಿರೆ ಮುಹಮ್ಮದ್ ಝಾಯದ್( ಬಿಲಾಲ್)ರನ್ನು ವಿವಾಹವಾದ ಬಳಿಕ ತಮ್ಮ ಪತಿ ಹಾಗೂ ಮಗನೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News