×
Ad

2016-17 ರಿಂದ ನೀಟ್ ಪರೀಕ್ಷೆ ಜಾರಿ: ಸಚಿವ ಪಾಟೀಲ್

Update: 2016-05-26 22:14 IST

ಮಡಿಕೇರಿ, ಮೇ 26: 2016-17ನೆ ಸಾಲಿನಿಂದ ನೀಟ್ ಪರೀಕ್ಷೆ ಜಾರಿಗೆ ಬರಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ.

  ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ಘಟಕಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ನೀಟ್ ಪರೀಕ್ಷೆ ಪ್ರಸಕ್ತ ಸಾಲಿನಿಂದ ಜಾರಿಗೊಳಿಸುವುದು ಬೇಡವೆಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೆವು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಿಇಟಿ ಪರೀಕ್ಷೆಯ ಮೂಲಕವಷ್ಟೆ ಆಯ್ಕೆ ನಡೆಯಲಿದ್ದು, ಈ ಸಾಲಿನಿಂದ ಆರಂಭಗೊಳ್ಳುತ್ತಿರುವ ವೈದ್ಯಕೀಯ ಕಾಲೇಜಿನ ಪ್ರಥಮ ತಂಡ ಅಂತಿಮ ವರ್ಷಕ್ಕೆ ಬರುವುದರ ಒಳಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯನ್ನು 650 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದರು. ಪ್ರಸ್ತುತ ಜಿಲ್ಲಾ ಆಸ್ಪತ್ರೆ 410 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ನಗರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಗೊಂಡಿರುವುದರಿಂದ ಇದಕ್ಕೆ ಅನುಗುಣವಾಗಿ ಆಸ್ಪತ್ರೆಯನ್ನು ಹೆಚ್ಚುವರಿ ಹಾಸಿಗೆಗಳೊಂದಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ಭರವಸೆ ನೀಡಿದರು. ಸಚಿವರ ಭೇಟಿಯ ಸಂದರ್ಭ ಜಿಲ್ಲಾ ಆಸ್ಪತ್ರೆಯ ಸರ್ಜನ್ ಮುತ್ತಪ್ಪ, ವೈದ್ಯಕೀಯ ಕಾಲೇಜಿನ ಡೀನ್ ಮಹೇಂದ್ರ, ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ, ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್, ನಗರಸಭಾ ಸದಸ್ಯ ಎ.ಸಿ. ದೇವಯ್ಯ ಉಪಸ್ಥಿತರಿದ್ದರು.

ಶಾಸಕರ ಅಸಮಾಧಾನ :

ಸಚಿವರ ಆಗಮನದ ಬಗ್ಗೆ ಮಾಹಿತಿ ನೀಡಿಲ್ಲವೆಂದು ಸ್ಥಳಕ್ಕಾಗಮಿಸಿದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರನ್ನು ತರಾಟೆಗೆ ತೆಗೆದು ಕೊಂಡ ಪ್ರಸಂಗವೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News