‘ಕೈಗಾ’ದಿಂದ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಣೆ
ಕಾರವಾರ, ಮೇ 26: ಕೈಗಾ ಅಣು ವಿದ್ಯುತ್‌ಸ್ಥಾವರ (ಎನ್‌ಪಿಸಿಎಲ್ ಕೈಗಾ) ವತಿಯಿಂದ 170 ಅಂಗವಿಕಲರಿಗೆ ಒಟ್ಟು 15.72ಲಕ್ಷ ರೂ. ವೆಚ್ಚದ ವಿವಿಧ ಸಾಧನ ಸಲಕರಣೆಗಳನ್ನು ಗುರುವಾರ ವಿತರಿಸಲಾಯಿತು.
ಕಾರ್ಪೊರೇಟ್ ಸಾಮಾಜಿಕ ಬದ್ಧತೆ ಯೋಜನೆ ಯಡಿಯಲ್ಲಿ ಕೈಗಾ ಟೌನ್‌ಶಿಪ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೈಗಾ ಸ್ಥಾವರದ ನಿರ್ದೇಶಕ ಎಚ್.ಎನ್.ಭಟ್ ಉದ್ಘಾಟಿಸಿದರು. ಅಂಗವಿಕಲರಿಗೆ ಕೃತಕ ಕೈ, ಕಾಲುಗಳು, ಗಾಲಿಕುರ್ಚಿ, ಶ್ರವಣ ಸಾಧನಗಳು, ತ್ರಿಚಕ್ರ ವಾಹನ, ಮಾನಸಿಕ ನ್ಯೂನತೆ ಹೊಂದಿರುವವರಿಗೆ ಎಂಎಸ್‌ಐಯಿಡಿ ಸಾಧನಗಳನ್ನು ಸಮಾರಂಭದಲ್ಲಿ ವಿತರಿಸಲಾಯಿತು. ಕೈಗಾ ಅಣು ವಿದ್ಯುತ್ ಕೇಂದ್ರದ ಸುತ್ತಮುತ್ತಲಿನ ಹಳ್ಳಿಗಳ ಅಂಗವಿಕಲ ಫಲಾನುಭವಿಗಳನ್ನು ಗುರುತಿಸಿ ಸಾಧನ ಸಲಕರಣೆಗಳನ್ನು ನೀಡಲಾಯಿತು. ಹಟ್ಟಿಕೇರಿ, ಉಳವಿ, ಮಲ್ಲವಳ್ಳಿ ಮತ್ತು ಮಲ್ಲಾಪುರ ಗ್ರಾಮಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆಸಲಾಗಿತ್ತು. ಫಲಾನುಭವಿಗಳನ್ನು ಅವರ ಗ್ರಾಮದಿಂದ ಕಾರ್ಯಕ್ರಮಕ್ಕೆ ಕರೆ ತರಲು ಸಾರಿಗೆ ವ್ಯವಸ್ಥೆಯನ್ನು ಎನ್‌ಪಿಸಿಎಲ್ ವತಿಯಿಂದ ಅನುಕೂಲ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪಿ.ಎಚ್.ನಾಯಕ್, ಕೈಗಾ ಕೇಂದ್ರದ ಎಂ.ಪಿ.ಹನ್ಸೋರಾ ಮಾತನಾಡಿದರು. ಕೈಗಾ ಅಣುವಿದ್ಯುತ್ ಕೇಂದ್ರದ ಸಾಮಾಜಿಕ ಬದ್ಧತೆ ಕಾರ್ಯಕ್ರಮಗಳ ಬಗ್ಗೆ ಫಲಾನುಭವಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.