ಸಾರ್ವಜನಿಕರ ಸಂಚಾರಕ್ಕೆ ಮಂಜಗುಣಿಗೆ ಬಾರ್ಜ್ ಸೇವೆ
ಅಂಕೋಲಾ, ಮೇ 26: ಕಳೆದ ಹಲವು ವರ್ಷಗಳಿಂದ ಮಂಜಗುಣಿ-ಗಂಗಾವಳಿ ನಡುವೆ ದೋಣಿ ಸಂಚಾರವೇ ಪ್ರಯಾಣಿಕರಿಗೆ ಆಧಾರವಾಗಿತ್ತು. ಆದರೆ ಸದ್ಯ ದೋಣಿ ಸಂಚಾರವನ್ನು ಮುಕ್ತಗೊಳಿಸಿ ಬಾರ್ಜ್ ಸೇವೆಗೆ ಬಂದರು ಇಲಾಖೆ ಮುಂದಾಗಿದ್ದು, ಗುರುವಾರ ಮಂಗಳೂರಿನಿಂದ ಗಂಗಾವಳಿಗೆ ಬಾರ್ಜ್ ಬಂದು ನಿಂತಿದೆ.
ಗುರುವಾರ ಪ್ರಾಯೋಗಿಕವಾಗಿ ಬಾರ್ಜ್ ತನ್ನ ಸಂಚಾರವನ್ನು ಆರಂಭಿಸಿತು. ಮಂಜಗುಣಿ ಮತ್ತು ಗಂಗಾವಳಿಯ ಜನರು ಬಾರ್ಜ್ ಏರಿ ಪುಳಕಗೊಂಡರು. ಮಂಗಳೂರಿನ ಹಂಗಾರಕಟ್ಟೆಯ ಹಡಗುದಾಣದಲ್ಲಿ ನಿರ್ಮಾಣಗೊಂಡಿರುವ ಈ ಬಾರ್ಜ್ 1ಕೋಟಿ 80ಲಕ್ಷ ರೂ. ವೆಚ್ಚದ್ದಾಗಿದ್ದು, ಗಂಗಾವಳಿ ಹಳ್ಳದ ಎರಡೂ ದಕ್ಕೆಗಳನ್ನು ಸುಮಾರು 1ಕೋಟಿ 70ಲಕ್ಷ ರೂ. ವೆಚ್ಚದ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಗಂಟೆಗೆ 14ರಿಂದ 15ಕಿ.ಮೀ ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಬಾರ್ಜ್ 3ರಿಂದ 4ನಿಮಿಷದೊಳಗೆ ಒಂದು ದಡದಿಂದ ಇನ್ನೊಂದು ದಡಕ್ಕೆ ಸೇರುವ ಸಾಮರ್ಥ್ಯಹೊಂದಿದೆ. 25ಮೀ ಉದ್ದ, 8ಮೀ ಅಗಲ ವಿರುವ ಬಾರ್ಜ್ 50ಟನ್ ಭಾರವನ್ನು ಹೊತ್ತೊಯ್ಯಬಲ್ಲದ್ದಾಗಿದ್ದು, 2ಭಾರೀ ವಾಹನ, 6ಲಘು ವಾಹನ, ದ್ವಿಚಕ್ರ ವಾಹನ ಸೇರಿದಂತೆ ನೂರಾರು ಪ್ರಯಾಣಿಕರನ್ನು ಏಕಕಾಲದಲ್ಲಿ ಕೊಂಡೊಯ್ಯಬಲ್ಲದಾಗಿದೆ. ನದಿ ನೀರಿನ ಹರಿತವನ್ನು ಸೀಳಿ ಸಾಗಬಲ್ಲ 140 ಅಶ್ವಶಕ್ತಿಯ ಎರಡು ಇಂಜಿನ್‌ಗಳನ್ನು ಅಳವಡಿಸಲಾಗಿದ್ದು, ಬಾರ್ಜ್ ಸರಾಗವಾಗಿ ಹಾಗೂ ಸುರಕ್ಷಿತವಾಗಿ ದಡ ಮುಟ್ಟುವಲ್ಲಿ ಸಹಾಯಕಾರಿಯಾಗಲಿದೆ. ಬಾರ್ಜ್‌ನ ಸೇವೆಯಿಂದಾಗಿ ವಾಹನ ಸಂಚಾರ, ಗೋಕರ್ಣ ಸೇರಿದಂತೆ ಕಡಲ ಕಿನಾರೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದ್ದು, ವ್ಯಾಪಾರ ವ್ಯವಹಾರಗಳಿಗೆ ಅನುಕೂಲವಾಗಲಿದೆ.
ಮಂಜಗುಣಿ-ಗಂಗಾವಳಿ ನಡುವಿನ ದೋಣಿ ಸಂಚಾರದ ಗುತ್ತಿಗೆಯನ್ನು ಪಡೆದ ಅಬ್ದುಲ್ ರೆಹಮಾನ್‌ರವರು ಈ ಹಿಂದೆ ಹೊನ್ನಾವರದಲ್ಲಿ ಬಾರ್ಜ್ ನಡೆಸಿದ ಅನುಭವದ ಮೇಲೆ ಈ ಬಾರ್ಜ್‌ನ್ನು ಮಂಗಳೂರಿನಿಂದ ಯಶಸ್ವಿಯಾಗಿ ಗಂಗಾವಳಿಗೆ ತಲುಪಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಮಟಾ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಬಾರ್ಜ್ ತನ್ನ ಪ್ರಾಯೋಗಿಕ ಸಂಚಾರ ನಡೆಸಿದ್ದು, ತಂತ್ರಜ್ಞರ ನೇಮಕ ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರತಿನಿತ್ಯ ಬಾರ್ಜ್ ಸೇವೆ ಜನರಿಗೆ ದೊರೆಯಲಿದೆ ಎಂದರು.ಗೋಕರ್ಣ ಜಿ.ಪಂ. ಕ್ಷೇತ್ರದ ಸದಸ್ಯೆ ಗಾಯತ್ರಿ ಗೌಡ, ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಹನೀಫ್ ಸಾಬ್ ಬಾರ್ಜ್ ಸೇವೆ ಕುರಿತು ಮಾತನಾಡಿದರು. ನಾಡುಮಾಸ್ಕೇರಿ ಗ್ರಾ.ಪಂ.ಸದಸ್ಯ ಶ್ರೀನಿವಾಸ ನಾಯಕ, ಸ್ಥಳೀಯ ಪ್ರಮುಖರಾದ ಮಹಾಬಲೇಶ್ವರ (ಮಾಬು) ನಾಯ್ಕ, ಶ್ರೀಪಾದ ನಾಯ್ಕ, ಕೃಷ್ಣಾನಂದ ನಾಯ್ಕ, ಚಂದ್ರಶೇಖರ ನಾಯ್ಕ, ಸದಾನಂದ ನಾಯ್ಕ, ಚೇತನ ಎನ್.ನಾಯಕ, ಗೋಪಿನಾಥ ಮತ್ತಿತರರು ಉಪಸ್ಥಿತರಿದ್ದರು. ಬಾರ್ಜ್ ಸೇವೆ ಇಂದಿನಿಂದ ಪ್ರಾಯೋಗಿಕವಾಗಿ ಸೇವೆಗೆ ಮುಂದಾಗಿದ್ದು, ಜೂನ್ ಮೊದಲ ವಾರದಲ್ಲಿ ಅಧಿಕೃತವಾಗಿ ಸೇವೆ ಲೋಕಾರ್ಪ ಣೆಯಾಗಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.