×
Ad

ಬಿತ್ತನೆಗೆ ಕಳಪೆ ಆಲೂಗೆಡ್ಡೆ ಪೂರೈಕೆ: ರಸ್ತೆಗೆ ಸುರಿದು ರೈತರ ಆಕ್ರೋಶ

Update: 2016-05-27 17:38 IST

ಹಾಸನ, ಮೇ 27: ಸರಕಾರದಿಂದ ನೀಡಲಾಗುತ್ತಿರುವ ದೃಢೀಕೃತ ಬಿತ್ತನೆ ಆಲೂಗೆಡ್ಡೆಯನ್ನು ಕರಗಿರುವುದು ಬೆಳಕಿಗೆ ಬಂದಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ನಗರದ ಸಮೀಪ ಬಿ.ಕಾಟಿಹಳ್ಳಿ, ಕೈಗಾರಿಕಾ ಪ್ರದೇಶದ ರಸ್ತೆ ಬಳಿ ಆಲೂಗೆಡ್ಡೆ ಬಿತ್ತನೆ ಬೀಜ ಕೊಳ್ಳಲೆಂದು ತಾಲೂಕಿನ ಮರ್ಕುಲಿ, ಹೆರಗು, ರಾಯಪುರ, ಕಟ್ಟಾಯದ ಬ್ಯಾಡರಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ರೈತರು ರಸೀದಿಯ ಜೊತೆ ಬಂದಿದ್ದರು. ಲಾರಿಯಲ್ಲಿ ಬಂದಿದ್ದ 142 ಚೀಲ ಆಲೂಗೆಡ್ಡೆಯ ಗುಣಮಟ್ಟದ ಕುರಿತು ಅನುಮಾನಗೊಂಡ ರೈತರು ಎರಡು ಮೂರು ಚೀಲ ಆಲೂಗೆಡ್ಡೆಗಳನ್ನು ರಸ್ತೆಗೆ ಸುರಿದಾಗ ಕೊಳೆತು ನಾರುತ್ತಿರುವ ಆಲೂಗೆಡ್ಡೆ ಕಂಡು ಬಂದಿತು. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೊಳೆತ ಬಿತ್ತನೆ ಆಲೂಗೆಡ್ಡೆಯ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಸರಕಾರವು ರೈತರಿಗೆ ಉತ್ತಮ ಬಿತ್ತನೆ ಆಲೂಗೆಡ್ಡೆ ಕೊಡುವುದಾಗಿ ಪ್ರತಿ ಕ್ವಿಂಟಾಲ್‌ಗೆ ನಮ್ಮಿಂದ 1 ಸಾವಿರ ರೂ.ಪಡೆದಿದೆ. ನಂತರ ಮತ್ತೆ 703 ರೂ.ಗಳನ್ನು ಪಡೆಯಲಾಗಿದೆ. ತಡವಾಗಿ ನೀಡುತ್ತಿರುವ ಬಿತ್ತನೆ ಬೀಜದ ಬಗ್ಗೆ ಅನುಮಾನದಿಂದ ಚೀಲ ತೆಗೆದು ನೋಡಿದರೆ ಕೊಳೆತು ನಾರುತ್ತಿರುವ ಆಲೂಗೆಡ್ಡೆ ಸೇರಿದೆ. ಇದು ಬಿತ್ತನೆ ಮಾಡುವ ಆಲೂಗೆಡ್ಡೆಯಲ್ಲ. ತಿನ್ನುವ ಆಲೂಗೆಡ್ಡೆಯಾಗಿದೆ ಎಂದು ದೂರಿದರು.

ನಾವು ಜಮೀನನ್ನು ಹದಮಾಡಿ ಆಲೂ ಬಿತ್ತನೆ ಮಾಡಲು ಸಿದ್ಧರಾಗಿ ಕುಳಿತಿದ್ದೇವೆ. ಆದರೇ ಕೊಳೆತು ನಾರುತ್ತಿರುವ ಆಲೂಗೆಡ್ಡೆ ನೀಡಿ ಮತ್ತೆ ರೈತರನ್ನು ನಷ್ಟಕ್ಕೆ ಸಿಲುಕಿಸಲು ಮುಂದಾಗಿದ್ದಾರೆ. ಕೂಡಲೇ ರೈತರಿಗೆ ಆಗಿರುವ ನಷ್ಟವನ್ನು ಸರಕಾರ ಭರಿಸಬೇಕು. ಮುಖ್ಯಮಂತ್ರಿಗಳು ಜಿಲ್ಲೆಯ ರೈತರ ಕಷ್ಟವನ್ನು ಆಲಿಸಿ ಬಗೆಹರಿಸುವಂತೆ ಮನವಿ ಮಾಡಿದರು. ಇಲ್ಲವಾದರೇ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ರೈತರಾದ ಶಶಿಕುಮಾರ್, ನಂಜೇಗೌಡ, ಮಂಜುನಾಥ್, ಅಣ್ಣಪ್ಪಗೌಡ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News