×
Ad

ಹಾಸನ: ಡೆಂಗ್ ನಿಯಂತ್ರಣಕ್ಕೆ ನಗರಸಭೆಯಿಂದ ಮನೆ ಮನೆ ಪ್ರಚಾರ

Update: 2016-05-27 17:52 IST

ಹಾಸನ, ಮೇ 27: ಡೆಂಗ್ ಜ್ವರ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ನಗರಸಭೆ ಹಾಗೂ ಆರೋಗ್ಯ ಇಲಾಖೆಯಿಂದ ಪ್ರತಿ ಮನೆ ಮನೆಗೂ ತೆರಳಿ ಕರಪತ್ರ ನೀಡಿ ಅರಿವು ಮೂಡಿಸಲಾಯಿತು.

ನಗರದ ಪೆನ್‌ಷನ್ ಮೊಹಲ್ಲಾ 18ನೆ ವಾರ್ಡಿನಲ್ಲಿ ನಗರಸಭೆಯಿಂದ ಮನೆಗಳಿಗೆ ತೆರಳಿ ಸೊಳ್ಳೆಯಿಂದ ಹರಡುವ ಡೆಂಗ್ ಜ್ವರದ ಬಗ್ಗೆ ಮಾತಿ ನೀಡಿ ಕರಪತ್ರದೊಂದಿಗೆ ಅರಿವು ಮೂಡಿಸಿದರು. ಇದೆ ವೇಳೆ ಚರಂಡಿ, ನೀರು ನಿಂತಿರುವ ಜಾಗಕ್ಕೆ ನಾಶಕ ಔಷಧಿ ಸಿಂಪಡಿಸಲಾಯಿತು. ಇದೆ ವೇಳೆ ಸ್ಥಳದಲ್ಲಿದ್ದ ಆರೋಗ್ಯಾಧಿಕಾರಿ ವೆಂಕಟೇಶ್ ಜ್ವರ ಬಂದವರ ಬಗ್ಗೆ ಮಾಹಿತಿ ಪಡೆದರು.


      ನಗರಸಭೆಯ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್ ಮಾತನಾಡಿ, ನಗರದಲ್ಲಿ ಡೆಂಗ್ ಪ್ರಕರಣ ಕಂಡು ಬಂದಿದ್ದು, ಸ್ಲಂ ಪ್ರದೇಶಗಳಾದ ಪೆನ್‌ಷನ್ ಮೊಹಲ್ಲಾ, ಚಿಕ್ಕನಾಳು, ವಿನಾಯಕ ನಗರ ಸೇರಿದಂತೆ ಇತರೆ ಭಾಗಗಳಲ್ಲಿ ಹೆಚ್ಚು ಡೆಂಗ್ ಕಾಣಿಸಿಕೊಂಡಿದೆ. ಒಟ್ಟು 12 ಪ್ರಕರಣಗಳು ದಾಖಲಾಗಿದ್ದು, 22 ಪ್ರಕರಣವು ಪರೀಕ್ಷೆಯಲ್ಲಿದೆ ಎಂದರು.

ನೀರನ್ನು 48 ಗಂಟೆಗಳ ಕಾಲ ಮಾತ್ರ ನೀರು ಉಪಯೋಗಿಸಿ ನಂತರ ಅದನ್ನು ಬದಲಾಯಿಸಲು ಸಲಹೆ ನೀಡಿದ ಅವರು ಇಲ್ಲವಾದರೆ ಆ ಭಾಗದಲ್ಲಿ ಸೊಳ್ಳೆ ಉತ್ಪತ್ತಿಯಾಗುತ್ತದೆ ಎಂದು ಸಲಹೆ ನೀಡಿದರು. ಡೆಂಗ್ ಬಗ್ಗೆ ಜಾಗೃತಿ ಮೂಡಿಸಲು ನಗರಸಭೆಯಿಂದ ಮನೆ ಮನೆಗೆ ತೆರಳಿ ಕರಪತ್ರ ನೀಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.

ಆರೋಗ್ಯ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದ್ದು, ಕೂಡಲೇ ಭರ್ತಿ ಮಾಡುವ ಮೂಲಕ ಡೆಂಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅವಕಾಶ ಕಲ್ಪಿಸಲು ಮನವಿ ಮಾಡಿದರು.

ಆರೋಗ್ಯಾಧಿಕಾರಿ ವೆಂಕಟೇಶ್ ಮಾತನಾಡಿ, ಡೆಂಗ್ ಜ್ವರ ಎಂಬುದು ಈಡಿಸ್ ಇಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿನಿಂದ ಮತ್ತೊಬ್ಬರಿಗೆ ಹರಡುತ್ತದೆ. ಇಂತಹ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತದೆ. ಹೆಚ್ಚು ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ ಎಂದರು.

ಬೂವನಹಳ್ಳಿ  ಡೆಂಗ್ ಪ್ರಕರಣ 2 ದಾಖಲಾಗಿದ್ದು, ಗುಡ್ಡೆನಹಳ್ಳಿಯಲ್ಲಿ-3, ಆರ್.ಸಿ ರಸ್ತೆ-1, ಕುವೆಂಪು ನಗರ-1 ಆದರ್ಶ ನಗರ-1, ಬಸವೇಶ್ವರ ಬಡಾವಣೆ ಸುತ್ತ-2 ಸೇರಿದಂತೆ ಒಟ್ಟು 12 ಡೆಂಗ್ ಪ್ರಕರಣಗಳು ದಾಖಲಾಗಿವೆ. 22 ಪ್ರಕರಣ ಪರೀಕ್ಷೆಯಲ್ಲಿದೆ ಎಂದರು. ಇದ್ದಕ್ಕಿದ್ದಂತೆ ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ರೋಗದ ಪ್ರಮುಖ ಲಕ್ಷಣವಾಗಿದೆ. ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು. ಜನತೆ ಜಾಗೃತೆ ವಹಿಸಿದರೆ ಇಂತಹ ರೋಗದಿಂದ ದೂರ ಇರಬಹುದು ಎಂದು ವಿವರಿಸಿದರು.

ಇದೆ ವೇಳೆ ನಗರಸಭೆ ಆಯುಕ್ತ ನಾಗಭೂಷಣ್, ಆರೋಗ್ಯಾಧಿಕಾರಿ ಕೃಷ್ಣಮೂರ್ತಿ, ನಗರಸಭೆ ಸದಸ್ಯರಾದ ಇರ್ಷಾದ್ ಪಾಷ, ಆರೀಪ್ ಖಾನ್, ಮಹೇಶ್, ಖಹಿಂ, ಅಮೀರ್ ಜಾನ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News