×
Ad

ಮಾಜಿ ಶಾಸಕ ಅಭಯ್ ಕುಮಾರ್ ರಿಂದ ಕೋಟ್ಯಾಂತರೂ ಮೌಲ್ಯದ ಸರಕಾರಿ ಭೂಮಿ ಕಬಳಿಕೆ

Update: 2016-05-27 18:18 IST

ಬೆಂಗಳೂರು.ಮೇ.27:ಬೆಳಗಾವಿ ನಗರದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಸರ್ಕಾರಿ ಜಮೀನನ್ನು ಮಾಜಿ ಶಾಸಕ ಅಭಯ್ ಕುಮಾರ್ ಭರಮಗೌಡ ಪಾಟೀಲ್ ಅವರು ಕಬಳಿಸಿದ್ದು, ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಭಾವೂರಾವ್ ಗಡಕರಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಇಂದ್ರಪ್ರಸ್ಥ ನಗರದ ಜಕ್ಕಿನ್ ಹೋಂಡಾ ಪ್ರದೇಶದಲ್ಲಿ 8 ಗುಂಟೆ ಸರ್ಕಾರಿ ಜಮೀನಾಗಿದ್ದರೂ ಮಾಜಿ ಶಾಸಕರು ಪ್ರಭಾವ ಬೀರಿ ನಕ್ಷೆ ಬದಲಿಸಿ ಬೇರೆಯವರಿಂದ ಖರೀದಿಸಿದಂತೆ ದಾಖಲೆಗಳನ್ನು ತೋರಿಸಿದ್ದಾರೆ. ಮೊದಲು ಬಿ.ಎಸ್. ಜಾವಲಿ ಅವರಿಂದ ಕೃಷಿ ಜಮೀನನ್ನು ಖರೀದಿಸಿ ಭೋಗಸ್ ಕುಟುಂಬಕ್ಕೆ ಜಿಪಿಎ ಮಾಡಿಸಿಕೊಟ್ಟು, 1992ರಲ್ಲಿ ಭೂ ಪರಿವರ್ತನೆ ಮಾಡಿಸಿಕೊಂಡು, ನಂತರ ಪ್ರಾಧಿಕಾರದಿಂದ ಅನುಮೋದನೆ ಮಾಡಿಸಿಕೊಂಡಿರುತ್ತಾರೆ ಎಂದು ಹೇಳಿದರು.

ಇದಾದ ನಂತರ ಮಾಜಿ ಶಾಸಕರ ಸಹೋದರ ಶೀತಲ್ ಭರಮಗೌಡ ಪಾಟೀಲ್ ಹೆಸರಿಗೆ ದಾಖಲೆಗಳನ್ನು ಮಾಡಿಸಿಕೊಂಡು ಸರ್ಕಾರಕ್ಕೆ ವಂಚಿಸಿದ್ದಾರೆ. ಈ ಜಮೀನು ವಿಚಾರದಲ್ಲಿ ಮಾಜಿ ಶಾಸಕರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಎಲ್ಲ ರೀತಿಯ ಪ್ರಭಾವ ಬೀರಿದ್ದರು.

ಹೀಗಾಗಿಯೇ ತಾವು ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿಗಳಾದ ಎಸ್.ಕೆ.ಮುಖರ್ಜಿ ಮತ್ತು ರವಿ ಮಳೀಮಠ್ ಅವರಿದ್ದ ನ್ಯಾಯಪೀಠ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದೆ ಎಂದು ತಿಳಿಸಿದರು. ವಕೀಲ ರವಿಕುಮಾರ್ ಗೋಕಾಕ್‌ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News