×
Ad

ಪರಿಸರದ ನಾಶದಿಂದ ಭವಿಷ್ಯದಲ್ಲಿ ಅಪಾಯ: ಡಿಸಿ

Update: 2016-05-27 21:47 IST

ಕುಶಾಲನಗರ, ಮೇ 27: ಪರಿಸರದ ಬೆಲೆ ತಿಳಿಯದೆ ನಾಶ ಮಾಡುತ್ತಾ ಹೋದರೆ ಭವಿಷ್ಯದಲ್ಲಿ ನಮಗೇ ಅಪಾಯ. ಇದರ ಮುನ್ಸೂಚನೆ ನಮಗೆ ಈಗಲೇ ಸಿಗುತ್ತಿದೆ. ಮುಂದಿನ ಪೀಳಿಗೆ ಮತ್ತಷ್ಟು ಕಷ್ಟ ಅನುಭವಿಸಬೇಕಾಗಬಹುದು ಎಂದು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮ್ಮದ್ ಹೇಳಿದರು. ಕರ್ನಾಟಕ ಸರಕಾರದ ಅರಣ್ಯ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞ್ಞಾನ ಇಲಾಖೆ, ಕೊಡಗು ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ ಹಾಗೂ ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಸಹಯೋಗದೊಂದಿಗೆ ಇಲ್ಲಿನ ಕಾವೇರಿ ನಿಸರ್ಗಧಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೈಸೂರು ವಿಭಾಗಮಟ್ಟದ ವಿಶ್ವ ಜೀವ ವೈವಿಧ್ಯ ದಿನಾಚರಣೆ ಮತ್ತು ಪರಿಸರ ಸಂರಕ್ಷಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲೇ ನದಿ ನೀರನ್ನು ನೇರವಾಗಿ ಕುಡಿಯುವ ಸ್ಥಿತಿ ಇಲ್ಲ ಮಾಲಿನ್ಯ ನಿಯಂತ್ರಣ ಮಂಡಳಿಯ ಗುಣಮಟ್ಟ ಸೂಚ್ಯಂಕದ ಪ್ರಕಾರ ತಲಕಾವೇರಿಯಲ್ಲಿ ನೀರಿನ ಸ್ಥಿತಿ ‘ಬಿ’ ಕೆಟಗೆರಿಯಲ್ಲಿದೆ. ನದಿ ಈ ಮಟ್ಟಕ್ಕೆ ತಲುಪುವಲ್ಲಿ ನಮ್ಮ ಕೊಡುಗೆ ಅಪಾರವಾಗಿದ್ದು, ಮತ್ತೆ ಬಳಸಲು ಯೋಗ್ಯವಾಗುವಂತಹ ಗುಣಮಟ್ಟಕ್ಕೆ ತರಲು ಎಲ್ಲರೂ ಕೈ ಜೋಡಿಸಬೇಕಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯ ಲೂಟಿಯೂ ಇಂದಿನ ದುಸ್ಥಿತಿಗೆ ಕಾರಣವಾಗಿದೆ. ಎಂದರು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಇದೇ ವೇಳೆ ಜಿಲ್ಲಾಧಿಕಾರಿ ಪ್ರಮಾಣ ವಚನ ಬೋಧಿಸಿದರು.

 ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ನನ್ನೊಬ್ಬನಿಂದಲೇ ಪರಿವರ್ತನೆ ಸಾಧ್ಯವಾಗುತ್ತದೆಯಾ ಎನ್ನುವ ಅಳಕು ಬಿಟ್ಟು ನಮ್ಮ ಮನೆಯಿಂದಲೇ ಪರಿಸರಕ್ಕೆ ಸಂಬಂಧಿಸಿದ ಕೆಲಸಗಳನ್ನು ಆರಂಭಿಸಬೇಕು. ಪರಿಸರ ಮತ್ತು ಜೀವ ವೈವಿಧ್ಯತೆಯ ಉಳಿವು ಸರಕಾರದ ಜವಾಬ್ದಾರಿ ಎಂಬ ಮನೋಭಾವದಿಂದ ಹೊರಬರಬೇಕು. ಸಾರ್ವಜನಿಕರೂ ಸ್ವಯಂಪ್ರೇರಿತರಾಗಿ ಅಮೂಲ್ಯ ಪರಿಸರದ ರಕ್ಷಣೆಗೆ ಮುಂದಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಜೆ.ಸೋಮಣ್ಣ ಮಾತನಾಡಿ, ಕೇವಲ 10 ವರ್ಷಗಳ ಹಿಂದೆ ಕಾವೇರಿ ನದಿ ನೀರನ್ನು ಬೊಗಸೆಯಲ್ಲಿ ತೆಗೆದು ಹಾಗೆಯೇ ಕುಡಿಯಬಹುದಿತ್ತು. ಈಗ ಹಾಗೆ ಮಾಡಲು ಹೋದರೆ ಕೂಡಲೇ ಆಸ್ಪತ್ರೆ ಸೇರಬೇಕಾದ ದುಸ್ಥಿತಿ ಇದೆ ಎಂದರು..

ರಾಜ್ಯ ವಿಜ್ಞಾನ ಪರಿಷತ್‌ನ ಪರಿಸರ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕ, ಶಿಬಿರದ ನಿರ್ದೇಶಕ ಟಿ.ಜಿ.ಪ್ರೇಮಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು, ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಡಾ. ಹರೀಶ್ ಆರ್. ಭಟ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್, ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೃಷ್ಣೇಗೌಡ, ನಾಗೇಶ್ ಅರಳಕುಪ್ಪೆ, ವಿಜ್ಞ್ಞಾನ ಪರಿಷತ್ತ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷ ಸುಭಾಷ್ ರೈ, ಚಿಕ್ಕಬೆಟ್ಟಗೇರಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಸಣ್ಣಪ್ಪ, ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ಮತ್ತಿತರರು ಇದ್ದರು. ಪರಿಸರ ಸ್ವಯಂಸೇವಕ ಎಚ್.ಸಿ. ಗೋವಿಂದರಾಜ್ ಹಾಡಿದ ಪರಿಸರ ಗೀತೆ ಗಮನ ಸೆಳೆಯಿತು. ಶಿಬಿರದಲ್ಲಿ ಮೈಸೂರು ವಿಭಾಗದ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News