ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿಗೆ ಮನವಿ
ಕಾರವಾರ, ಮೇ 27: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘವು ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಸಂಘ ಕಳೆದ ಮೂರು ವರ್ಷಗಳಿಂದ ಗುತ್ತಿಗೆ ನೌಕರರ ಸಂಬಳ ಸವಲತ್ತು ಹೆಚ್ಚಿಸಲು ಚಳವಳಿ ನಡೆಸುತ್ತಾ ಬಂದಿದೆ. ಚಳವಳಿಗೆ ಸ್ಪಂದಿಸಿದ ಸರಕಾರ ಹರಿಯಾಣ ಮಾದರಿಯಲ್ಲಿ ನೌಕರರಿಗೆ ಸಂಬಳ ಸವಲತ್ತು ನೀಡಲು ಮತ್ತು ಹಂತ ಹಂತವಾಗಿ ಖಾಯಂ ಗೊಳಿಸುವುದಾಗಿ ತಿಳಿಸಿತ್ತು. ಆದರೆ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ರಾಜ್ಯ ಉಚ್ಛ ನ್ಯಾಯಾಲಯ ಹಾಗೂ ಕಲಬುರಗಿ ಹೈ ಕೋರ್ಟ್ ಪೀಠ ಗುತ್ತಿಗೆ ಆಧಾರಿತ ಪೌರ ಕಾರ್ಮಿರನ್ನು ಖಾಯಂ ಗೊಳಿಸುವಂತೆ ಆದೇಶ ನೀಡಿದೆ. ಆದರೆ ಸರಕಾರ ನೌಕರರನ್ನು ಈ ವರೆಗೂ ಖಾಯಂಗೊಳಿಸದೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದೆ. ಹಾಗಾಗಿ ಕಾರ್ಮಿಕರಿಗೆ ನೀಡ ಬೇಕಾದ ನ್ಯಾಯಯುತವಾದ ಸೌಲಭ್ಯವನ್ನು ಶೀಘ್ರದಲ್ಲಿ ನೀಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ಮನವಿಯಲ್ಲಿ ನೀಡಲಾಗಿದೆ. ಮನವಿ ಸಲ್ಲಿಕೆಯಲ್ಲಿ ಸಿಐಟಿಯು ಮುಖಂಡ ಹರೀಶ ನಾಯ್ಕ, ಡಿ. ಸ್ಯಾಮ್ಸನ್, ಸುನೀಲ್ ಕಿಂದಳಕರ ಮತ್ತಿತರರು ಉಪಸ್ಥಿತರಿದ್ದರು.