ಒಳಚರಂಡಿ ಅವ್ಯವಸ್ಥೆ: ನಗರಸಭೆಯಿಂದ ತುರ್ತು ಸಭೆ
ಮಡಿಕೇರಿ, ಮೇ 27: ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ ಮತ್ತು ಅವ್ಯವಸ್ಥೆಗಳಿಂದ ಕೂಡಿದೆ ಎನ್ನುವ ಆರೋಪ ನಗರಸಭಾ ಸದಸ್ಯರುಗಳಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ನಗರಸಭೆೆಯ ತುರ್ತು ಸಭೆ ನಡೆಯಿತು.
ಅಧ್ಯಕ್ಷೆ ಶ್ರೀಮತಿ ಬಂಗೇರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಳಚರಂಡಿ ಕಾಮಗಾರಿಯ ವಿರುದ್ಧ ಸದಸ್ಯರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಗರದೆಲ್ಲೆಡೆ ಒಳಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಇಲ್ಲಿಯವರೆಗೆ ಈ ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ಸದಸ್ಯರುಗಳಿಗೆ ನೀಡಿಲ್ಲ. ಸದಸ್ಯರುಗಳನ್ನು ಕತ್ತಲೆಯಲ್ಲಿಟ್ಟು ಅಧಿಕಾರಿಗಳೆ ಯೋಜನೆಯನ್ನು ರೂಪಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಒಟ್ಟು 115 ಕಿ.ಮೀ ಉದ್ದದ ಒಳಚರಂಡಿ ಯೋಜನೆಯಲ್ಲಿ ಕೇವಲ 10 ಕಿ.ಮೀ.ನಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು, ಉಳಿದಿರುವ 105 ಕಿ.ಮೀ. ಉದ್ದದ ಚರಂಡಿ ಕಾಮಗಾರಿ ಯಾವಾಗ ಪೂರ್ಣಗೊಳಿಸುತ್ತೀರಿ ಎಂದು ಅಧಿಕಾರಿಗಳನ್ನು ಸದಸ್ಯರು ಪಶ್ನಿಸಿದರು. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ನೀರು ಹರಿಯದೆ ಜನರು ಸಂಕಷ್ಟ ಎದುರಿಸುವುದು ಖಚಿತವೆಂದು ಸದಸ್ಯರು ಅಭಿಪ್ರಾಯಪಟ್ಟರು. ತಕ್ಷಣ ಕೆಲಸವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ಕೆಯುಡಬ್ಲ್ಯುಎಸ್ ಇಂಜಿನಿಯರ್ ಪ್ರಸನ್ನ ಕುಮಾರ್‌ಮಾತನಾಡಿ, ಒಳಚರಂಡಿಗೆ ಮನೆಗಳ ತ್ಯಾಜ್ಯ ನೀರಿನ ಸಂಪರ್ಕವನ್ನು ಕಲ್ಪಿಸಬೇಕಾಗಿದೆ. ಸುಮಾರು 48 ಕೋಟಿ ರೂ. ವೆಚ್ಚದಲ್ಲಿ 115 ಕಿ.ಮೀ. ಉದ್ದದ ಒಳಚರಂಡಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಸರ್ವ ಸದಸ್ಯರ ಒಪ್ಪಿಗೆಯಂತೆ ಮುಂದಿನ 10 ದಿನಗಳ ಒಳಗೆ ಕೆಯುಡಬ್ಲ್ಯುಎಸ್ ಅಧಿಕಾರಿಗಳು ಒಳಚರಂಡಿ ಯೋಜನೆಯ ರೂಪು ರೇಷೆಗಳ ಸಂಪೂರ್ಣ ಮಾಹಿತಿಯನ್ನು ನೀಡಿ ವೈಜ್ಞ್ಞಾನಿಕ ರೀತಿಯಲ್ಲಿ ಕಾಮಗಾರಿಯನ್ನು ಮುಂದುವರಿಸುವಂತೆ ಸೂಚಿಸಲಾಯಿತು.
ಅಧ್ಯಕ್ಷೆ ಶ್ರೀಮತಿ ಬಂಗೇರ, ಉಪಾಧ್ಯಕ್ಷೆ ಲೀಲಾ ಶೇಷಮ್ಮ ಹಾಗೂ ಪೌರಾಯುಕ್ತೆ ಪುಷ್ಪಾವತಿ ಉಪಸ್ಥಿತರಿದ್ದರು.
ನಗರಸಭಾ ಸದಸ್ಯರುಗಳ ನಡುವೆ ಮಾರಾಮಾರಿ:
ನಗರಸಭಾ ಸದಸ್ಯ ಎಚ್.ಎಂ. ನಂದಕುಮಾರ್ ಹಾಗೂ ನಾಮನಿರ್ದೇಶಿತ ಸದಸ್ಯ ಗಿಲ್ಬರ್ಟ್ ನಡುವೆ ಸಭೆಯ ಬಳಿಕ ಮಾತಿನ ಚಕಮಕಿ ನಡೆದು, ಪರಸ್ಪರ ಕೈಕೈ ಮಿಲಾಯಿಸಿದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ತುರ್ತು ಸಭೆಯಲ್ಲಿ ಕೆರೆಗಳ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭ ಸದಸ್ಯ ಗಿಲ್ಬರ್ಟ್ ತಮ್ಮ ವಾರ್ಡ್ ವ್ಯಾಪ್ತಿಯ ರೋಷನಾರ ಕೆರೆಯ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಈ ಸಂದರ್ಭ ಅವರು ನಮ್ಮ ವಾರ್ಡ್‌ನಲ್ಲಿ ಗೆದ್ದು ಬಂದಿರುವ ಸದಸ್ಯರೊಬ್ಬರು ಯಾವುದಕ್ಕೂ ಪ್ರಯೋಜನಕ್ಕೆ ಇಲ್ಲದವರೆಂದು ಗೊಣಗಿಕೊಂಡರೆಂದು ಹೇಳಲಾಗಿದೆ.
ಇದನ್ನೆ ನೆಪವಾಗಿಟ್ಟುಕೊಂಡ ಸದಸ್ಯ ನಂದ ಕುಮಾರ್ ಸಭೆಯ ಬಳಿಕ ಸ್ಥಾಯಿ ಸಮಿತಿ ಕಚೇರಿಗೆ ಗಿಲ್ಬರ್ಟ್ ಅವರನ್ನು ಕರೆಸಿಕೊಂಡು ಸಭೆಯಲ್ಲಿ ಮಾಡಿದ ಟೀಕೆಗೆ ತಿರುಗೇಟು ನೀಡಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.