ಸಚಿವರಿಂದ ವಾಲ್ಮೀಕಿ ಭವನದ ಕಾಮಗಾರಿ ಪರಿಶೀಲನೆ
ಕುಶಾಲನಗರ, ಮೇ 27: ಇಲ್ಲಿನ ಸುಂದರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಳಿಯ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ ಸಂಪೂರ್ಣಗೊಳ್ಳುವಂತೆ ನೋಡಿಕೊಳ್ಳುವುದು ತಮ್ಮ ಆದ್ಯ ಕರ್ತವ್ಯ ಎಂದು ಸಣ್ಣ ಕೈಗಾರಿಕೆ ಸಚಿವ ಸತೀಶ್ ಜಾರಕಿ ಹೊಳಿ ಹೇಳಿದ್ದಾರೆ.
ಕುಶಾಲನಗರಕ್ಕೆ ಆಗಮಿಸಿದ್ದ ಅವರು ವಾಲ್ಮೀಕಿ ಭವನದ ಕಾಮಗಾರಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಸದ್ಯಕ್ಕೆ 1ಕೋಟಿ ರೂ. ವೆಚ್ಚದಲ್ಲಿ ಹಾಲಿ ವಾಲ್ಮೀಕಿ ಭವನ ನಿರ್ಮಾಣವಾಗುತ್ತಿದೆ. ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪಿದ್ದು, ಮೇಲ್ಮಹಡಿ ನಿರ್ಮಾಣಕ್ಕೆ ಹೆಚ್ಚುವರಿ 1ಕೋಟಿ ರೂ, ಮತ್ತು ಪಾರ್ಕಿಂಗ್ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾ ವಾಲ್ಮೀಕಿ ಸಮಾಜದವರು ಹೆಚ್ಚುವರಿ 50ಸೆಂಟ್ ಜಾಗಕ್ಕೆ ಬೇಡಿಕೆ ಇಟ್ಟಿದ್ದಾರೆ. ಜಾಗಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗುವುದು. ಹೆಚ್ಚಿನ ಹಣಕಾಸಿನ ನೆರವಿನ ಬಗ್ಗೆ ಸಮಾಜಕಲ್ಯಾಣ ಖಾತೆ ಸಚಿವರ ಜೊತೆ ಮಾತನಾಡಿ ವಾಲ್ಮೀಕಿ ಸಮಾಜಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಎಂ. ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಶೋಕ, ಜಂಟಿ ಕಾರ್ಯದರ್ಶಿ ವೈ.ಟಿ.ಪರಮೇಶ್, ಸಂಘಟನಾ ಕಾರ್ಯದರ್ಶಿ ಕೆ.ಆರ್.ಚಂದ್ರು, ನಿರ್ದೇಶಕರಾದ ಆರ್.ಕೃಷ್ಣ, ನಾರಾಯಣ ಸ್ವಾಮಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಕೆ.ಮಂಜುನಾಥ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.