ಬಸವನಹಳ್ಳಿ ಸರಕಾರಿ ಪಿಯು ಕಾಲೇಜಿಗೆ ಶೇ.92 ಫಲಿತಾಂಶ
ಚಿಕ್ಕಮಗಳೂರು, ಮೇ 27: ದ್ವಿತೀಯ ಪಿಯು ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಬಸವನಹಳ್ಳಿ ಬಾಲಿಕ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಶೇ. 92ರಷ್ಟು ಫಲಿತಾಂಶ ನೀಡಿದ್ದು, ನಿಜವಾದ ಸಾಧನೆ ಎಂದು ಎಸ್‌ಡಿಎಂಸಿ ಮತ್ತು ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.
ನಗರದ ಬಸವನಹಳ್ಳಿ ಪಿಯು ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಮೂಲಕ ಪ್ರೋತ್ಸಾಹ ಧನ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ವಾಣಿಜ್ಯ ವಿಭಾಗದಲ್ಲಿ ಎಂ.ಸಿ.ಹರ್ಪಿತಾ 548ಅಂಕಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ, ಎಚ್.ಆರ್.ಪವಿತ್ರಾ 535 ಅಂಕ ಪಡೆದು ದ್ವಿತೀಯ, ಎ.ಆರ್.ಪೂಜಾ 532ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಸಿ.ಎನ್.ವೀಣಾ 525, ಎ.ಎಸ್.ಪೂಜಾ 519, ಪಲ್ಲವಿ 507, ಮತ್ತು ವಾಣಿಜ್ಯ ವಿಭಾಗದಲ್ಲಿ ರೋಜಾ 504 ಅಂಕಗಳನ್ನು ಗಳಿಸಿ ಕ್ರಮವಾಗಿ 7ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 80ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 73ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
224ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಅತ್ಯುನ್ನತ ಶ್ರೇಣಿಯಲ್ಲಿ 7, ಪ್ರಥಮ 118, ದ್ವಿತೀಯ 46 ಹಾಗೂ 13 ವಿದ್ಯಾರ್ಥಿಗಳು ತೃತೀಯ ಸ್ಥಾನಗಳಿಸಿ ಒಟ್ಟಾರೆ 184ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 3 ಸಾವಿರ , ದ್ವಿತೀಯ 2ಸಾವಿರ ಹಾಗೂ ಉಳಿದ ನಾಲ್ಕು ವಿದ್ಯಾರ್ಥಿಗಳಿಗೆ ತಲಾ 1ಸಾವಿರದಂತೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಸರಕಾರಿ ಶಾಲೆಗಳು ಎಂದರೆ ಕಡೆಗಣಿಸುವವರಿಗೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತರುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹುಬ್ಬೇರಿಸುವಂತೆ ಮಾಡಿದ್ದಾರೆ. ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ನಮ್ಮ ಶಾಲೆಯ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಶೇ. 92ರಷ್ಟು ಫಲಿತಾಂಶ ತರುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಬಂದಿರುವುದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಸಾವಿತ್ರಿ, ಉಪನ್ಯಾಸಕರಾದ ದಯಾನಂದ್, ನಾಗರಾಜ್, ಕಿರಣ್, ಲೋಹಿತ್, ವಿರೂಪಾಕ್ಷ, ಮಹೇಶ್ವರಪ್ಪ, ಲಕ್ಷ್ಮೀಕಾಂತ ನಾಯಕ್, ಧರ್ಮಶೆಟ್ಟಿ, ಶಂಕರ್‌ನಾಯಕ್, ಚಂದ್ರವೌಳಿ, ಜಾನವಿ, ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.