ರಜೆ ಮಂಜೂರು ಮಾಡಲು ಪೊಲೀಸರಿಂದ ಮನವಿ
ಸಾಗರ, ಮೇ 27: ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಜೂ. 4ರಂದು ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಒಂದು ದಿನದ ರಜೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಪೊಲೀಸರು ಶುಕ್ರವಾರ ಎಎಸ್ಪಿ ಅವರಿಗೆ ಮನವಿ ಸಲ್ಲಿಸಲು ಮುಂದಾದರು. ಆದರೆ, ಎಎಸ್ಪಿ ನಿಶಾ ಜೇಮ್ಸ್ ಅವರು ಪೊಲೀಸರಿಂದ ಮನವಿ ಸ್ವೀಕರಿಸಲು ನಿರಾಕರಿಸಿ, ಪ್ರತಿಭಟನೆ ಕೈಬಿಡುವಂತೆ ಪೊಲೀಸರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಪೊಲೀಸರು ಮನವಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಪ್ರಮುಖವಾಗಿ ವೇತನ ತಾರತಮ್ಯ ಹಾಗೂ ಒತ್ತಡದಿಂದ ಪೊಲೀಸರು ಕರ್ತವ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಇಲಾಖೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪೊಲೀಸ್ ಇಲಾಖೆಯಲ್ಲಿ ಪ್ರತಿದಿನ 12 ರಿಂದ 18 ಗಂಟೆ ಕೆಲಸ ಮಾಡುವ ಸ್ಥಿತಿ ಇದೆ ಎಂದು ಹೇಳಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಎಸೆಸೆಲ್ಸಿಯಿಂದ ಪಿಯುಸಿವರೆಗೆ ಓದಿದ್ದಾರೆ. ಆದರೆ ಕಂಪ್ಯೂಟರ್ ಆಪರೇಟಿಂಗ್‌ನಿಂದ ಹಿಡಿದು ಕಾಯ್ದೆ ಕಾನೂನುಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇಷ್ಟಿದ್ದರೂ ಪೊಲೀಸ್ ಸಿಬ್ಬಂದಿಗೆ ಇತರೆ ಇಲಾಖೆಗಳಿಗಿಂತ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ. ಬೇರೆ ಇಲಾಖೆಗಳ ನೌಕರರು ತಮ್ಮ ಸಂಬಳ ಸವಲತ್ತುಗಳಿಗೆ ಪ್ರತಿಭಟಿಸುವ ಹಕ್ಕನ್ನು ಹೊಂದಿದ್ದಾರೆ. ಆದರೆ ನಮಗೆ ಎಷ್ಟೇ ತೊಂದರೆಯಾದರೂ ಧ್ವನಿ ಎತ್ತುವ ಹಕ್ಕು ಇಲ್ಲವಾಗಿದೆ. ನಮ್ಮ ನೋವುಗಳನ್ನು ಯಾರ ಬಳಿಯೂ ಹೇಳಿಕೊಳ್ಳದ ಸ್ಥಿತಿಯಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ವತಿಯಿಂದ ಜೂ. 4ರಂದು ಕರೆ ಕೊಟ್ಟಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಒಂದು ದಿನದ ರಜೆಯನ್ನು ಮಂಜೂರು ಮಾಡುವಂತೆ ಎಎಸ್ಸೈ, ದಫೇಧರ್, ಪೊಲೀಸ್ ಸಿಬ್ಬಂದಿ ಸೇರಿದಂತೆ 51 ಜನರು ಸಹಿ ಮಾಡಿದ ಮನವಿಯಲ್ಲಿ ಆಗ್ರಹಿಸಲಾಗಿದೆ.