ಕರವೇಯಿಂದ ಪ್ರತಿಭಟನೆಯ ಎಚ್ಚರಿಕೆ
ಮಡಿಕೇರಿ, ಮೇ 28: ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಗ್ರಾಮದ ಹೇಮಾವತಿ ನದಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ಮಿತಿ ಮೀರಿದ್ದು, ಮುಂದಿನ 15 ದಿನಗಳಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೆೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್, ಫೆಬ್ರವರಿ ತಿಂಗಳಿನಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರೊಬ್ಬರು ಮರಳು ದಂಧೆಯಲ್ಲಿ ಶಾಮೀಲಾಗಿರುವ ವಿಚಾರ ಬಹಿರಂಗವಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮರಳು ದಂಧೆಕೋರರೊಂದಿಗೆ ಶಾಮೀಲಾಗಿರುವ ದೂರವಾಣಿ ಸಂಭಾಷಣೆ ಇತ್ತೀಚೆಗೆ ಬಯಲಾಗಿದೆ. ಇದರ ಮಾಹಿತಿ ದೊರೆತ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಅಭಿಯಂತರರ ವಿರುದ್ಧ ಕ್ರಮ ಜಾರಿಯಾಗದೆ ಇರುವುದನ್ನು ಗಮನಿಸಿದರೆ ಹಣದ ಪ್ರಭಾವದಿಂದ ರಕ್ಷಣೆ ಪಡೆಯುತ್ತಿರುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿ ದಿನ ರಾತ್ರಿ ಹೇಮಾವತಿ ನದಿಯಿಂದ 40ರಿಂದ 50 ಲೋಡ್‌ಗಳಷ್ಟು ಮರಳು ಕಳ್ಳ ಸಾಗಣೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲರೂ ಮರಳು ದಂಧೆಯಲ್ಲಿ ಪಾಲುದಾರರು ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಸುಮಾರು 3 ವರ್ಷಗಳ ಹಿಂದೆ ಕರವೇ ಕಾರ್ಯಕರ್ತರೊಬ್ಬರು ಮರಳು ದಂಧೆಯನ್ನು ತಡೆಯಲು ಹೋದಾಗ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಮರಳು ಮಾಫಿಯಾವನ್ನು ಸಾಧಾರಣ ಶಕ್ತಿಯಿಂದ ತಡೆಯಲು ಸಾಧ್ಯವಾಗುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದ ಕೆ.ಎಸ್.ದೀಪಕ್, ಮುಂದಿನ 15 ದಿನಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟವನ್ನು ತೀವ್ರ ಗೊಳಿಸುವುದಾಗಿ ಎಚ್ಚರಿಕೆ ನೀಡಿದರು.