ನೀರಿಗಾಗಿ ನಾರಿಯರ ಪ್ರತಿಭಟನೆ
ಚಿಕ್ಕಮಗಳೂರು, ಮೇ 28: ಕಳೆದ 4ತಿಂಗಳಿನಿಂದ ಕುಡಿಯಲು ನೀರು ಸರಬರಾಜು ಮಾಡದ ನಗರಸಭೆಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ನಗರದ ಉಪ್ಪಳ್ಳಿ ಬಡಾವಣೆಯ ಮಹಿಳೆಯರು ಖಾಲಿ ಕೊಡಗಳೊಂದಿಗೆ ನಗರಸಭೆಯ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಉಪ್ಪಳ್ಳಿ ಬಡಾವಣೆಯ ಮುತ್ತಿನಮ್ಮ ದೇವಸ್ಥಾನ ರಸ್ತೆಯ ಭಾಗಕ್ಕೆ ಕಳೆದ 4ತಿಂಗಳಿನಿಂದ ಕುಡಿಯಲು ನೀರು ಸರಬರಾಜು ಮಾಡಿಲ್ಲ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಈವರೆಗೂ ಯಾವುದೇ ಅಧಿಕಾರಿ ಸ್ಥಳಕ್ಕೆ ಬಾರದೇ ಸ್ಥಳೀಯ ನಾಗರಿಕರನ್ನು ನಗರಸಭೆ ನಿರ್ಲಕ್ಷಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕುಡಿಯಲು ನೀರಿಗಾಗಿ ಒಂದೂವರೆ ಕಿ.ಮೀ ಕ್ರಮಿಸಬೇಕಿದ್ದು, ಇದರಿಂದ ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಪರಿಶೀಲನೆ ನಡೆಸಿ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಗೆ ಸಂಬಂಧಿಸಿದಂತೆ ಪತ್ರಿಕೆಗೆ ಪ್ರತಿಕ್ರಿಯಿಸಿದ ಪೌರಾಯುಕ್ತೆ ಪಲ್ಲವಿ ಪ್ರತಿಭಟನಾಕಾರರು 4ತಿಂಗಳಿನಿಂದ ನೀರು ಸರಬರಾಜಾಗುತ್ತಿಲ್ಲ ಎಂದು ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ಕಳೆದ 4ದಿನಗಳಿಂದ ಉಪ್ಪಳ್ಳಿ ಬಡಾವಣೆಯ ಪೈಪು ಒಡೆದುಹೋಗಿದೆ ಎಂಬ ಕಾರಣಕ್ಕೆ ನೀರು ಸರಬರಾಜಾಗದಿರುವುದು ಸತ್ಯದ ಸಂಗತಿ. ಅವಶ್ಯವಿರುವೆಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಬಡಾವಣೆಯನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.