×
Ad

ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಕೆಲಸ ಮಾಡಿದ ತೃಪ್ತಿಯಿದೆ: ಎಸ್.ಟಿ.ಚಂದ್ರೇಗೌಡ

Update: 2016-05-28 22:02 IST

ಚಿಕ್ಕಮಗಳೂರು, ಮೇ 28: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿ ರೈತರ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಆಡಳಿತ ಮಂಡಳಿಗಿದೆ ಎಂದು ಅಧ್ಯಕ್ಷ ಎಸ್.ಟಿ.ಚಂದ್ರೇಗೌಡ ತಿಳಿಸಿದ್ದಾರೆ.

 ಅವರು ನಗರ ಹೊರವಲಯದ ಎಪಿಎಂಸಿಯಲ್ಲಿ ಹಮ್ಮಿಕೊಂಡಿದ್ದ ಕೊನೆಯ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಚ್ಛತೆಗೆ ಆದ್ಯತೆ ನೀಡಿ ಕೆಲಸವನ್ನು ಆರಂಭಿಸಿದ್ದೆವು. ಮಾರುಕಟ್ಟೆಯಲ್ಲಿ ರೈತರಿಗೆ ಯಾವುದೆ ರೀತಿ ಅನ್ಯಾಯವಾಗದಂತೆ ಬೆಳೆಗಳನ್ನು ಮಾರಾಟ ಮಾಡುವುದು. ರೈತರ ಮೇಲೆ ಯಾವುದೇ ರೀತಿ ದೌರ್ಜನ್ಯ ತಡೆಯಲು ವಿವಿಧೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲಾಗಿದ್ದು, ದೃಶ್ಯಾವಳಿಗಳನ್ನು ವೀಕ್ಷಿಸಲು ಪ್ರತ್ಯೇಕ ವೆಬ್‌ಸೈಟ್ ರಚಿಸಿ ಅದರ ಮಾಹಿತಿಯನ್ನು ನೀಡಲಾಗುವುದು ಎಂದು ನುಡಿದರು.

ಮಾರುಕಟ್ಟೆಯಲ್ಲಿ ರೈತರಿಗೆ ಯಾವುದೆ ರೀತಿ ಅನ್ಯಾಯವಾಗದ ಹಾಗೆ ತಿಳಿದ ಮಟ್ಟಿಗೆ ಆಡಳಿತ ಮಂಡಳಿ ಸದಸ್ಯರು, ರೈತರು, ವರ್ತಕರು ಹಾಗೂ ಸಿಬ್ಬಂದಿ ಸಹಕಾರದಿಂದ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಮುಂದಿನ ಆಡಳಿತ ಮಂಡಳಿಗೆ ಬರುವ ಚುನಾಯತ್ ಪ್ರತಿನಿಧಿಗಳು ಸ್ವತಃ ರೈತರಾಗಿ ಅನುಭವ ಹೊಂದಿರುವವರು ಆಯ್ಕೆಯಾದರೆ ಎಪಿಎಂಸಿ ಅಭಿವೃದ್ಧಿ ಜೊತೆ ರೈತರ ಸರ್ವತೋಮುಖ ಬೆಳವಣಿಗೆಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ಉಪಾಧ್ಯಕ್ಷ ಬಿ.ಪಿ.ಈರಪ್ಪಗೌಡ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕ ತೆರೆದು ರೈತರು, ಕಾರ್ಮಿಕರು ಹಾಗೂ ವರ್ತಕರಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಾರುಕಟ್ಟೆ ಪ್ರಾಂಗಣದಲ್ಲಿ 2.5 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ರವೀಂದ್ರ, ಕೆ.ಪಿ.ವೆಂಕಟೇಶ್, ಕೆ.ಪಿ.ರಾಜೇಂದ್ರ, ಶಂಕರೇಗೌಡ, ಪಾರ್ವತಮ್ಮ, ಎಸ್.ಡಿ.ಚಂದ್ರೇಗೌಡ, ಕನ್ವರ್, ಕೆ.ನಿಂಗೇಗೌಡ, ಶಾಂತಕುಮಾರ್, ಅಮೀರ್‌ಜಾನ್, ಸಿಬ್ಬಂದಿ ಶಿವಕುಮಾರ್, ಧರ್ಮರಾಜ್ ಸಹಾಯಕ ನಿರ್ದೇಶಕ ಬಿ.ಎನ್.ಉಮಾಪತಿ, ಕಾರ್ಯದರ್ಶಿ ಎನ್.ಚಂದ್ರಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪಾಯಸ್ ಕಾಂಪೌಂಡ್ ರಸ್ತೆ ಅಭಿವೃದ್ಧಿಗೆ ಚಾಲನೆ

ಚಿಕ್ಕಮಗಳೂರು, ಮೇ 28: ಸ್ಥಳೀಯ ನಾಗರಿಕರ ಹಲವು ದಶಕಗಳ ಕನಸಾದ ಪಾಯಸ್ ಕಾಂಪೌಂಡ್ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದು ನಗರಸಭಾ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ತಿಳಿಸಿದ್ದಾರೆ.

ಅವರು ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಈ ರಸ್ತೆ ಪಾಯಸ್ ಕಾಂಪೌಂಡ್‌ನಿಂದ ರಾಮಚಂದ್ರರವರ ಮನೆಯವರೆಗೂ ಕೇವಲ 12ಅಡಿ ಇಕ್ಕಾಟ್ಟಾದ ರಸ್ತೆಯಾಗಿತ್ತು. ಅಲ್ಲದೆ ಚಾನೆಲ್ ಏರಿ ಕಿರಿದಾಗಿದ್ದ ಕಾರಣ ಹಲವು ಬಾರಿ ವಾಹನಗಳು ಚಾನಲ್‌ಗೆ ಉರುಳಿ ಅಪಘಾತ ಸಂಭವಿಸಿತ್ತು. ಆದ ಕಾರಣ ಅಗಲೀಕರಣಕ್ಕಾಗಿ ನಾಗರಿಕರಿಂದ ಹಲವು ಬಾರಿ ಮನವಿ ಸಲ್ಲಿಸಿದ್ದರು.

ಒಂದು ಭಾಗದಲ್ಲಿ ಖಾಸಗಿ ಜಾಗವಾಗಿದ್ದರಿಂದ ಅಲ್ಲಿನ ಮಾಲಕರಾದ ರಾಮಚಂದ್ರರೊಂದಿಗೆ ಕುಳಿತು ಚರ್ಚೆ ನಡೆಸಿ ರಸ್ತೆಗೆ ಜಾಗ ಬಿಟ್ಟುಕೊಟ್ಟರೆ ಶಾಲಾ ಮಕ್ಕಳಿಗೆ ಹಾಗೂ ಸಹಸ್ರಾರು ಜನರಿಗೆ ಅನುಕೂಲವಾಗುತ್ತದೆ ಎಂದಾಗ ದಾನವಾಗಿ ಬಿಟ್ಟುಕೊಟ್ಟರು. 14 ಲಕ್ಷ ರೂ. ಎಸ್‌ಎಫ್‌ಸಿ ಹಾಗೂ 8 ಲಕ್ಷ ರೂ. ನಗರಸಭಾ ಅನುದಾನದಲ್ಲಿ ರಸ್ತೆ ಅಗಲೀಕರಣ ಸೇರಿದಂತೆ ತಡೆಗೋಡೆ ನಿರ್ಮಿಸಿ 30 ಅಡಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಪೌರಾಯುಕ್ತೆ ಪಲ್ಲವಿ, ಎಇಇ ಆನಂದ್, ಇಂಜಿನಿಯರ್ ರಶ್ಮಿ, ವಸಂತರಾಮಚಂದ್ರ, ವಿಜಯಾ, ನಿವೃತ್ತ ಶಿಕ್ಷಕ ದೇಸಾಯಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News