×
Ad

ಜನಸಮೂಹಕ್ಕೆ ಆರೋಗ್ಯ ಶಿಬಿರಗಳ ಅಗತ್ಯವಿದೆ: ಶ್ರೀನಿವಾಸ್

Update: 2016-05-28 22:27 IST

ಸಾಗರ, ಮೇ 28: ನಮ್ಮಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಹೆಚ್ಚುತ್ತಿದೆ. ಜನಸಮೂಹಕ್ಕೆ ಆರೋಗ್ಯ ಭಾಗ್ಯ ಕಲ್ಪಿಸುವ ಆರೋಗ್ಯ ಶಿಬಿರದಂತಹ ಸಾಮೂಹಿಕ ಕಾರ್ಯಕ್ರಮ ಪ್ರಸ್ತುತ ಹೆಚ್ಚು ಅಗತ್ಯವಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನ.ಶ್ರೀನಿವಾಸ್ ಹೇಳಿದರು.

ಇಲ್ಲಿನ ರಾಮಕೃಷ್ಣ ವಿದ್ಯಾಲಯದಲ್ಲಿ ಶನಿವಾರ ಚಿಲುಮೆಕಟ್ಟೆ ಭೂತೇಶ್ವರ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ತೀರ್ಥಹಳ್ಳಿ ಪ್ರಸಾದ್ ನೇತ್ರಾಲಯ, ಮೈಸೂರಿನ ಮಾನಸ ಗಂಗೋತ್ರಿ ವಾಕ್-ಶ್ರವಣ ಸಂಸ್ಥೆ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಾಗ ಪ್ರಚಾರದ ಆಸೆ ಇರಬಾರದು. ಪ್ರಾಮಾಣಿಕವಾಗಿ ಜನರಿಗೆ ನಮ್ಮ ಸೇವೆ ತಲುಪಿಸಿದಾಗ ಜನರು ಗುರುತಿಸಿ, ನಮ್ಮನ್ನು ಗೌರವಿಸುತ್ತಾರೆ. ಆಧುನಿಕ ಯುಗದಲ್ಲಿ ಬೇರೆಬೇರೆ ಕಾರಣಗಳಿಂದ ಮನುಷ್ಯನ ದೇಹ ರೋಗದ ಗೂಡಾ ಗುತ್ತಿದೆ. ಚಿಕಿತ್ಸೆ ಪಡೆಯಲು ಸಹ ಹೋಗಲು ಸಾಧ್ಯವಾಗದ ಒತ್ತಡದಲ್ಲಿ ನಾವಿದ್ದೇವೆ. ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆಗೆ ಒಳಗೊಳ್ಳುವುದರಿಂದ ರೋಗಮುಕ್ತವಾಗಲು ಸಾಧ್ಯವಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಹಿತಕರ ಜೈನ್ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಉತ್ತಮ ಸಮಾಜದ ಲಕ್ಷಣವಾಗಿದೆ. ಆರೋಗ್ಯ ರಕ್ಷಣೆಗೆ ನಾವು ಬಳಸುತ್ತಿರುವ ಆಹಾರ, ಹಣ್ಣುಗಳು ವಿಷಯುಕ್ತವಾಗುತ್ತಿದೆ. ಆರೋಗ್ಯವಿಮೆಯನ್ನು ಹೆಚ್ಚು ಮಾಡಿಸಿಕೊಳ್ಳುವ ಮೂಲಕ ಸುಲಭವಾಗಿ ಆರೋಗ್ಯಭಾಗ್ಯ ಪಡೆಯುವ ನಿಟ್ಟಿನಲ್ಲಿ ಜನರು ಗಮನ ಹರಿಸಬೇಕು ಎಂದರು. ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ದೇವರಾಜ್ ಮಾತನಾಡಿದರು. ಭವಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚಿಲುಮೆಕಟ್ಟೆ ಭೂತೇಶ್ವರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಸಂತ ಎಸ್. ಶೇಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಪಂ ಸದಸ್ಯ ಚಂದ್ರಪ್ಪಕಲಸೆ, ನಗರಸಭೆ ಸದಸ್ಯ ಶ್ರೀನಿವಾಸ್ ಮೇಸ್ತ್ರಿ, ಡಾ. ತಾರಿಕ್, ಡಾ. ಕಿರಣ್‌ಮತ್ತಿರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News