ಬಸ್ ಮರಕ್ಕೆ ಢಿಕ್ಕಿ ಇಬ್ಬರ ಮೃತು್ಯ, ಹಲವರಿಗೆ ಗಾಯ
ಶಿಕಾರಿಪುರ, ಮೇ 28: ತಾಲೂಕಿನ ಮಂಚಿಕೊಪ್ಪ ಗ್ರಾಮದ ಬಳಿ ಖಾಸಗಿ ಬಸ್ಸೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಉಳಿದ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳನ್ನು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಇವರ ಆರೋಗ್ಯವನ್ನು ಸಂಸದ,ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶನಿವಾರ ಭೇಟಿ ನೀಡಿ ವಿಚಾರಿಸಿದರು.
ಶಾಸಕ ರಾಘವೇಂದ್ರರ ಜತೆ ಆಗಮಿಸಿದ ಯಡಿಯೂರಪ್ಪ ವಾರ್ಡ್ ಗೆ ತೆರಳಿ ಗಾಯಗೊಂಡ ಪ್ರಯಾಣಿಕರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ರೋಗಿಗಳಿಗೆ ಚಿಕಿತ್ಸೆಗೆ ಅಗತ್ಯವಾದ ಔಷಧ ಆಸ್ಪತ್ರೆಯಲ್ಲಿರುವ ಬಗ್ಗೆ ವಿಚಾರಿಸಿದ ಸಂಸದರಿಗೆ ವೈದ್ಯರ ತಂಡ ಸರ್ವ ರೀತಿಯ ಔಷಧಗಳು ಲಭ್ಯವಿದೆ ಎಂದು ಉತ್ತರಿಸಿದರು.
ನಂತರದಲ್ಲಿ ಸುದ್ದಿಗಾರರ ಜತೆ ಮಾತ ನಾಡಿದ ಯಡಿಯೂರಪ್ಪ, ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಜಯಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿ ಜೂ. 11ರಿಂದ 28 ರವರೆಗೆ ರಾಜ್ಯದ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಹಮ್ಮಿಕೊಂಡು ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 10 ಸಾವಿರ ಜನತೆಯ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಿ ಕೇಂದ್ರ ಸರಕಾರದ ಸಾಧನೆ, ರಾಜ್ಯ ಸರಕಾರ ವೈಫಲ್ಯವನ್ನು ಜನತೆಗೆ ಮನದಟ್ಟು ಮಾಡಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಟಿ.ಎಸ್ ಮೋಹನ್, ಸೈಯದ್ ಪೀರ್, ಮುಖಂಡ ಗುರುಮೂರ್ತಿ, ನಾಗರಾಜಪ್ಪ, ಗುರುರಾಜ ಜಗತಾಪ್, ಗಿರೀಶ್ ಹರಳೆಣ್ಣೆ, ಸುರೇಶ್, ತಾ.ವೈದ್ಯಾಧಿಕಾರಿ ಡಾ.ಮಂಜುನಾಥ, ತಜ್ಞ ವೈದ್ಯ ಡಾ.ಪ್ರಮೋದ್, ಡಾ. ಸುರೇಶ್, ರಾಜಸ್ವ ನಿರೀಕ್ಷಕ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.