ಅನಧಿಕೃತ ರ್ಯಾಫ್ಟಿಂಗ್ ಚಟುವಟಿಕೆಗಳಿಗೆ ನಿರ್ಬಂಧ: ಜಿಲ್ಲಾಧಿಕಾರಿ ಘೋಷ್ ಆದೇಶ
ಕಾರವಾರ, ಮೇ 28: ದಾಂಡೇಲಿಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ, ಸಂಬಂಧಪಟ್ಟ ಇಲಾಖೆಗಳಿಂದ ನಿರಾಪೇಕ್ಷಣಾ ಪತ್ರ ಪಡೆಯದೆ ಅನಧಿಕೃತವಾಗಿ ನಡೆಸುತ್ತಿರುವ ವಾಟರ್ ರ್ಯಾಫ್ಟಿಂಗ್ ಚಟುವಟಿಕೆಗಳನ್ನು ತಕ್ಷಣದಿಂದ ನಿರ್ಬಂಧಿಸಿ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಆದೇಶಿಸಿದ್ದಾರೆ.
ಶನಿವಾರ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ವಿವಿಧ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.
ಅನಧಿಕೃತವಾಗಿ ನಡೆಸುತ್ತಿರುವ ವಾಟರ್ ರ್ಯಾಫ್ಟಿಂಗ್ ಚಟುವಟಿಕೆಗಳನ್ನು ನಿಲ್ಲಿಸಬೇಕು. ಎಲ್ಲಾ ನಿಬಂಧನೆಗಳನ್ನು ಪಾಲಿಸಿ, ಪರವಾನಿಗೆ ಪಡೆದವರಿಗೆ ಮಾತ್ರ ರ್ಯಾಫ್ಟಿಂಗ್ ಚಟುವಟಿಕೆಗೆ ಅನುಮತಿ ನೀಡಲಾಗುವುದು ಎಂದರು.
ಮಾಜಾಳಿ ಸಮೀಪದ ತೀಲ್‌ಮಾತಿ ಬೀಚ್‌ಗೆ ಸಂಪರ್ಕಿಸುವ ಸೇತುವೆ ನಿರ್ಮಾಣಕ್ಕೆ 2.23 ಕೋಟಿ ರೂ. ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಅಂದಾಜುಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಕುಮಟಾ ಸುಂದರ ಸಮುದ್ರ ಕಿನಾರೆಯನ್ನು ಹೊಂದಿದೆ. ಸಂಪರ್ಕ ರಸ್ತೆ, ದೀಪ ಇತ್ಯಾದಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಗೋಕರ್ಣದ ಕೋಟಿತೀರ್ಥ ಹಲವಾರು ಕಾರಣಗಳಿಂದ ಕಲುಷಿತಗೊಳ್ಳುತ್ತಿದೆ. ಕೋಟಿತೀರ್ಥದ ಸ್ವಚ್ಛತಾ ಕಾರ್ಯದಲ್ಲಿ ಎಲ್ಲರೂ ಸಹಕರಿಸಬೇಕು. ಇಲ್ಲಿ ಪ್ರತ್ಯೇಕ ಸ್ನಾನಗೃಹ ಗಳ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಜಿಲ್ಲೆಯಲ್ಲಿ ಹಲವು ಸ್ಥಳಗಳಲ್ಲಿ ಯಾತ್ರಿನಿವಾಸ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದರೂ, ಸ್ಥಳದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಮುಂದಿನ 15ದಿನಗಳ ಒಳಗೆ ಸ್ಥಳ ಗುರುತಿಸಲು ಸಾಧ್ಯವಾಗದ ಕಡೆಗಳಲ್ಲಿ ಕಾಮಗಾರಿಯನ್ನು ಬದಲಾಯಿಸುವಂತೆ ಅವರು ಸೂಚನೆ ನೀಡಿದರು.
ಕಾರವಾರ ನಗರದ ಕಾಳಿ ನದಿ ದಡದಲ್ಲಿರುವ ಕೋಡಿಬಾಗ ಪ್ರದೇಶ ಅಭಿವೃದ್ಧಿ ಕಾರ್ಯವನ್ನು ಐಆರ್‌ಬಿ ಸಂಸ್ಥೆ ವಹಿಸಿಕೊಂಡಿದೆ. ಇಲ್ಲಿ 25ಆರ್‌ಸಿಸಿ ಬೆಂಚ್‌ಗಳನ್ನು ಅಳವಡಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸದರಿ ಉದ್ಯಾನದ ನಿರ್ವಹಣೆಯನ್ನು ಐಆರ್‌ಬಿ ಸಂಸ್ಥೆ ಮಾಡುವ ಕುರಿತು ಒಡಂಬಡಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಪ್ರವಾಸಿ ತಾಣಗಳಲ್ಲಿ ನಂದಿನಿ ಪಾರ್ಲರ್‌ಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗುವುದು. ಮುರ್ಡೇಶ್ವರ ಬಳಿ ಮಾವಳ್ಳಿ-2 ಗ್ರಾಮದಲ್ಲಿ ಪಿಪಿಪಿ ಮಾದರಿಯಲ್ಲಿ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಿಸಲು ಇದೇ ವೇಳೆ ತಾತ್ವಿಕ ಒಪ್ಪಿಗೆ ನೀಡಲಾಯಿತು. ಪ್ರವಾಸೋದ್ಯಮ ಕುರಿತು ಸಿದ್ಧಪಡಿಸಲಾಗುತ್ತಿರುವ ವೆಬ್‌ಸೈಟ್‌ನ್ನು ಶೀಘ್ರ ಪೂರ್ಣಗೊಳಿಸಬೇಕು. ಇದೇ ರೀತಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಆ್ಯಪ್ ಶೀಘ್ರ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.