ಮತ್ತಿಬ್ಬರ ಶಾಮೀಲಾತಿ ಶಂಕೆ: ಜಿಲ್ಲಾಧಿಕಾರಿ ಮೀರ್ ಅನೀಸ್
ಮಡಿಕೇರಿ, ಮೇ 28: ನಗರಸಭೆಯಲ್ಲಿ ನಡೆದಿರುವ ಅಂಗಡಿ ಮಳಿಗೆಗಳ ಬಾಡಿಗೆ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪ ಎದುರಿಸುತ್ತಿರುವ ಇಬ್ಬರು ಬಿಲ್‌ಕಲೆಕ್ಟರ್‌ಗಳಲ್ಲದೆ ಇನ್ನೂ ಇಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ತಿಳಿಸಿದ್ದಾರೆ.
ನಗರಸಭೆಗೆ ಭೇಟಿ ನೀಡಿ ವಿವಿಧ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರಗಳನ್ನು ಸಮಗ್ರವಾಗಿ ಪರಿಶೀಲಿಸಲಾಗಿದ್ದು, ಕೆಲವೊಂದು ನ್ಯೂನತೆಗಳು ಗೋಚರಿಸಿವೆ ಎಂದರು.
ಈಗಾಗಲೇ ಪ್ರಕರಣವನ್ನು ಎದುರಿಸುತ್ತಿರುವ ಇಬ್ಬರು ಆರೋಪಿಗಳೊಂದಿಗೆ ಮತ್ತಿಬ್ಬರು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸರಕಾರ ಮಟ್ಟದ ಲೆಕ್ಕ ಪರಿಶೋಧಕರು ಲೆಕ್ಕ ಪರಿಶೋಧನೆ ನಡೆಸಿ ವರದಿ ನೀಡಿದ ಬಳಿಕವಷ್ಟೇ ದುರುಪಯೋಗವಾಗಿರುವ ಹಣ ಮತ್ತು ಇನ್ನಿಬ್ಬರು ಸಿಬ್ಬಂದಿಯ ಪಾತ್ರವಿದೆಯೇ ಎನ್ನವುದು ಸ್ಪಷ್ಟವಾಗಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಶಂಕೆ ವ್ಯಕ್ತವಾಗಿರುವ ಇಬ್ಬರು ಸಿಬ್ಬಂದಿಯನ್ನು ವಿಚಾರಣೆಗೆ ಒಳ ಪಡಿಸಲಾಗುವುದು. ಅವರು ತೆರಿಗೆ ವಸೂಲಾತಿಗೆ ಬಳಸುತ್ತಿದ್ದ ನಗರಸಭೆಯ ಅಸಲಿ ಹಾಗೂ ನಕಲಿ ರಶೀದಿ ಪುಸ್ತಕಗಳನ್ನು ಲೆಕ್ಕಪರಿಶೋಧಕರ ಮೂಲಕ ತನಿಖೆಗೆ ಒಳಪಡಿಸಲಾಗಿದೆ ಎಂದರು.
ವಂಚನೆಗೊಳಗಾದ ವರ್ತಕರು ಮತ್ತು ವಾಣಿಜ್ಯೋದ್ಯಮಿಗಳು ಲಿಖಿತವಾಗಿ ಆಧಾರ ಸಹಿತ ದೂರು ನೀಡಿದರೆ ಕ್ರಮ ಜರಗಿಸಲಾಗುವುದು. ದೂರುದಾರರು ನೀಡುವ ರಶೀದಿಗಳನ್ನು ತನಿಖೆ ವೇಳೆ ಸೂಕ್ಷ್ಮವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದರು. ಬಿಲ್ ಕಲೆಕ್ಟರ್‌ಗಳಾದ ಸಜಿತ್ ಕುಮಾರ್ ಹಾಗೂ ಸ್ವಾಮಿ ಎಂಬವವರು ವ್ಯವಸ್ಥಿತವಾಗಿ ಹಣ ದುರುಪಯೋಗಪಡಿಸಿದ ಪ್ರಕರಣ ಬಯಲಿಗೆ ಬಂದ ನಂತರ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತನಿಖಾ ತಂಡ ನೀಡಿದ ವರದಿಯ ಆಧಾರದಲ್ಲಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ತೆರಿಗೆ ಸಂಗ್ರಹಕ್ಕೆ ಸೂಚನೆ
ಸುದೀರ್ಘ ಅವಧಿಯ ನಗರಸಭೆಯಲ್ಲಿ ಕಡತಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ತೆರಿಗೆ ಸಂಗ್ರಹದಲ್ಲಿ ಹಿಂದೆ ಬೀಳದಂತೆ ಅಗತ್ಯ ಕಾಳಜಿ ವಹಿಸಲು ಪೌರಾಯುಕ್ತೆ ಪುಷ್ಪಾವತಿ ಅವರಿಗೆ ಸೂಚನೆ ನೀಡಿದರು.
ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತಿತರ ಕಂದಾಯವನ್ನು ಸಂಗ್ರಹಣೆ ಮಾಡಿ ಅಭಿವೃದ್ಧಿಯತ್ತ ಸಾಗಬೇಕು. ನಗರಾಭಿವೃದ್ದಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಪ್ರವಾಸಿಗರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು. ವಾಹನಗಳ ದಟ್ಟಣೆ ಅಧಿಕವಾಗುತ್ತಿದ್ದು, ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಿದೆ ಎಂದರು.
ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಅವರು ನಗರಸಭೆಯ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮನೋಹರ್, ತಾಹಿರಾ, ಜಿಲ್ಲಾಧಿಕಾರಿ ಕಚೇರಿಯ ಷಣ್ಮುಖ ಮತ್ತಿತರರು ಹಾಜರಿದ್ದರು.
ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ (ಪ್ರಭಾರ)ಗೋಪಾಲಕೃಷ್ಣ ಬೇಕಲ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.