ವಿದ್ಯೆ ಇಲ್ಲದವನು ಪಶುವಿಗೆ ಸಮಾನ: ಎಚ್.ಎಸ್. ಪ್ರಕಾಶ್
ಹಾಸನ, ಮೇ 29: ವಿದ್ಯೆಯಿಲ್ಲದ ಮನುಷ್ಯ ಪಶುವಿಗೆ ಸಮಾನವಿದ್ದಂತೆ ಎಂದು ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್ ತಿಳಿಸಿದ್ದಾರೆ.
ನಗರದ ಪೆನ್‌ಷನ್ ಮೊಹಲ್ಲಾ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ಮುಸ್ಲಿಮ್ ಎಂಪ್ಲಾಯೀಸ್ ಕಲ್ಚರಲ್ ಅಸೋಸಿಯೇಶನ್‌ನ ಜಿಲ್ಲಾ ಘಟಕ ಹಾಗೂ ಉರ್ದು ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಮನೆ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಬಡವರು ಹೆಚ್ಚಿದ್ದು, ವಿದ್ಯಾವಂತರು ಕಡಿಮೆ ಇದ್ದಾರೆ. ಆದರೆ ಬಡತನ ಎಂಬುದು ಶಾಶ್ವತವಲ್ಲ. ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಅದನ್ನು ತೊಡೆದು ಹಾಕಬಹುದು ಎಂದು ಕಿವಿಮಾತು ಹೇಳಿದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಡಳಿತದಲ್ಲಿ ನಗರಕ್ಕೆ ಮೆಡಿಕಲ್ ಕಾಲೇಜ್ ಬಂದಿತು. ಮೆರಿಟ್ ಇದ್ದವರು ಯಾವ ಹಣ ನೀಡದೆ ನಿಗದಿತ ಶುಲ್ಕ ಮಾತ್ರ ನೀಡಿದರೆ ಕಾಲೇಜಿಗೆ ಸೇರಬಹುದು. ಹಣ ಉಳ್ಳವರಿಗೆ ಯಾವ ಅಂಕಗಳೂ ಅಗತ್ಯವಿಲ್ಲ. ಕೋಟ್ಯಾಂತರ ರೂ.ಗಳನ್ನು ನೀಡಿ ಸೀಟು ಪಡೆಯುತ್ತಾರೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿ.ಎಂ. ಕಾಂತರಾಜ್ ಮಾತನಾಡಿ, ಪ್ರತಿ ಮಕ್ಕಳು ಶಾಲೆಯನ್ನು ನಮ್ಮ ಮನೆ ಎಂದು ತಿಳಿಯಬೇಕು. ಆಗ ಮಾತ್ರ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದರು. ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಮನದೊಳಗೆ ಬಂದರೆ ಗುರಿ ಸಾಧಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಕೆಲ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಸೆಳೆಯಲು ಪೋಷಕರನ್ನು ಮೋಡಿ ಮಾಡುತ್ತಾರೆ. ನೀವು ನೀಡುವ ಹಣದಲ್ಲೆ ಸೌಕರ್ಯ ಒದಗಿಸುತ್ತಿದ್ದಾರೆ. ಆದರೆ ಸರಕಾರಿ ಶಾಲೆಗಳಲ್ಲಿ ಅಂತಹ ಯಾವ ಸೌಕರ್ಯಗಳೂ ಇಲ್ಲ ಎಂದು ಖಾಸಗಿಯತ್ತ ಬಾಗಿರುವುದು ದುರದೃಷ್ಟಕರ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಮ್ ಎಂಪ್ಲಾಯೀಸ್ ಕಲ್ಚರಲ್ ಅಸೋಸಿಯೇಶನ್‌ನ ಜಿಲ್ಲಾ ಘಟಕದ ರಾಜ್ಯ ಕಾರ್ಯದರ್ಶಿ ಅನ್ವರ್ ಬಾಷಾ, ಅಧ್ಯಕ್ಷ ಖಾದರ್ ಬೇಗ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡ, ನಗರಸಭಾ ಸದಸ್ಯರಾದ ಆರೀಫ್ ಖಾನ್, ಅಬ್ದುಲ್ ಖಯ್ಯುಮ್, ಅಮೀರ್ ಜಾನ್, ಎಸ್‌ಡಿಎಮ್‌ಸಿ ಅಧ್ಯಕ್ಷ ಶಾಹತಾಜ್ ಬೇಗ್, ಕಾರ್ಯಕ್ರಮದ ಸಂಚಾಲಕ ವಾಜಿದ್ ಖಾನ್, ಹುಸೇನ್, ಸೈಯದ್ ಪಾಝಿಯ ಹಜರತ್, ಆಯಾಷ ಮತ್ತಿತರರು ಪಾಲ್ಗೊಂಡಿದ್ದರು.