×
Ad

ಜೆಡಿಎಸ್ ಆಡಳಿತಾವಧಿಯಲ್ಲಿ ಶಿಕ್ಷಕರಿಗೆ ಒಂದು ಲಕ್ಷ ಉದ್ಯೋಗ: ಎಚ್.ಡಿ. ಕುಮಾರಸ್ವಾಮಿ

Update: 2016-05-29 21:48 IST

ಹಾಸನ, ಮೇ 29: ಕಾಂಗ್ರೆಸ್ ಪಕ್ಷ 60 ವರ್ಷದಲ್ಲಿ ಮಾಡದ ಸಾಧನೆಯನ್ನು ಜೆಡಿಎಸ್ ತನ್ನ ಅಧಿಕಾರಾವಧಿಯಲ್ಲಿ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
 
ದಕ್ಷಿಣ ಪದವಿದರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅ್ಯರ್ಥಿ ಶ್ರೀಕಂಠೇಗೌಡ ಪರ ಪ್ರಚಾರದ ವೇಳೆ ಪವನಪುತ್ರ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಆಡಳಿತದಲ್ಲಿ ಗೋವಿಂದೇಗೌಡ ಶಿಕ್ಷಣ ಮಂತ್ರಿಯಾಗಿದ್ದಾಗ ಒಂದು ಲಕ್ಷ ಉದ್ಯೋಗವನ್ನು ಶಿಕ್ಷಕರಿಗೆ ನೀಡಿದ್ದಾರೆ. ನಂತರ ಬಂದ ಸಮಿಶ್ರ ಸರಕಾರದಲ್ಲಿ ಹೊರಟ್ಟಿ ಸಚಿವರಾಗಿ ಶಿಕ್ಷಕರ ಮತ್ತು ಕಾಲೇಜ್ ಉಪನ್ಯಾಸಕರ ನೇಮಕಕ್ಕೆ ಮುಂದಾದ ನಿರ್ಧಾರ ಬಿಟ್ಟರೇ ಉಳಿದ ಯಾವ ಪಕ್ಷದ ಆಡಳಿತಗಳೂ ಕೊಡುಗೆ ನೀಡಿಲ್ಲ ಎಂದರು.

ಕಳೆದ 60 ವರ್ಷದಲ್ಲಿ ಮಾಡದ ಸಾಧನೆಯನ್ನು ಸಮಿಶ್ರ ಸರ್ಕಾರದಲ್ಲಿ ಕೊಡಲಾಗಿದೆ. ಶಿಕ್ಷಕರು ಇಂದು ಹಲವಾರು ಬೇಡಿಕೆಯನ್ನು ಸರಕಾರದ ಮುಂದೆ ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಕುಮಾರನಾಯ್ಕಾ ವರದಿ ಜಾರಿಗಾಗಿ ಬೇಡಿಕೆ ಮುಂದಿಟ್ಟಿದ್ದು, ಇದುವರೆಗೂ ಸಮಸ್ಯೆ ಬಗ್ಗೆ ಯಾವ ಗಮನವನ್ನು ನೀಡಿರುವುದಿಲ್ಲ ಎಂದು ದೂರಿದರು. ಬಿಜೆಪಿ ಮತ್ತು ಕಾಂಗ್ರೆಸ್ ಶಿಕ್ಷಣ ಕ್ಷೇತ್ರದಲ್ಲಿ ಯಾವ ದೊಡ್ಡ ಸಾಧನೆ ಮಾಡದಿದ್ದರೂ ಕೇವಲ ಭರವಸೆಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪೊಲಿಸ್ ಸಿಬ್ಬಂದಿ ಜೂನ್ 4 ರಂದು ಸಾಮೂಹಿಕ ರಜೆ ಘೋಷಣೆ ಮಾಡಿದ್ದು, 50 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ರಜೆಗೆ ಅರ್ಜಿ ಹಾಕಿದ್ದಾರೆ. ಗೃಹ ಸಚಿವರು ದಾರಿ ತಪ್ಪಿಸುವ ಕೆಲಸದಲ್ಲಿ ಮುಳುಗಿದ್ದಾರೆ. ಅಂದು ಯಾರಾದರೂ ರಜೆ ಮಾಡಿದರೇ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಸೂಚಿಸಿದ್ದಾರೆ ಎಂದು ಕಿಡಿಕಾರಿದರು.

ಪ್ರತಿ ನಿತ್ಯ ಬಿಸಿಲು ಎನ್ನದೆ, ರಾತ್ರಿ ಎನ್ನದೆ ಸೇವೆ ಸಲ್ಲಿಸಿ ಜನತೆಗೆ ರಕ್ಷಣೆ ಕೊಡುವ ಪೊಲೀಸ್ ಸಿಬ್ಬಂದಿಯ ಕಷ್ಟ ಗೃಹಮಂತ್ರಿಗೆ ತಿಳಿದಿಲ್ಲ. ಅವರು ಇಂತಹ ಕೆಲಸ ಮಾಡಿದರೇ ಸತ್ಯಾಂಶ ತಿಳಿಯಬಹುದು ಎಂದು ಸಲಹೆ ನೀಡಿದರು.

ಬಿಪಿಎಲ್ ಪಡಿತರ ಕಾರ್ಡಿನಲ್ಲಿ ಅಕ್ಕಿ ಕೊಡಲು ತೀರ್ಮಾನಿಸಿದ್ದರೂ ಈಗಿನ ಸರಕಾರ ಬಂದ ಮೇಲೆ ಹಲವಾರು ತಿಂಗಳು ನೀಡದೆ ವಂಚಿಸುತ್ತಿದೆ. ಜೊತೆಗೆ ಪೊಲೀಸರಿಗೆ ನೀಡುವ ಸಂಬಳ ಕೂಡ ತೀರ ಕಡಿಮೆ ಎಂದರು. ಪೊಲೀಸ್ ಇಲಾಖೆ ಸಮಸ್ಯೆ ಆಲಿಸಿ ಪರಿಹಾರ ಕೊಡದೆ ದಬ್ಬಾಳಿಕೆ ಮಾಡಿ ಅವರ ಮೇಲೆ ಹೊಡೆಯುವ ಕೆಲಸ ಮಾಡುವುದು ಅವರ ಅಧಿಕಾರಕ್ಕೆ ಶೋಬೆ ತರುವಂತದಲ್ಲ ಎಂದು ಕಿಡಿಕಾರಿದರು.

ಜೆಡಿಎಸ್ ಆಡಳಿತದಲ್ಲಿ ಪೊಲೀಸ್ ವೇತನ ಏರಿಕೆ ಮಾಡಿದ್ದು, ಆದರೆ ಕಾಂಗ್ರೆಸ್ ಆಡಳಿತದಲ್ಲಿ ಯಾವ ಕೆಲಸ ಆಗಿದೆ ಎಂದು ಪ್ರಶ್ನೆ ಮಾಡಿದರು. ಈಗಿರುವ ಸರಕಾರ ಕಮಿಷನ್ ಪಡೆದು ಗುತ್ತಿಗೆ ನೀಡುವ ಸರಕಾರವಾಗಿದೆ ಎಂದ ಅವರು, ಮಾಡಿರುವ ್ರಷ್ಟಚಾರದ ಬಗ್ಗೆ ಕ್ಯಾಸೆಟ್ ಮಾಡುವುದಾದರೇ ಆಡಳಿತದಲ್ಲಿರುವ ಎಲ್ಲಾ ಮಂತ್ರಿಗಳದ್ದು ಮಾಡಬಹುದು. ಈಗಿನ ಪಿಬ್ಲೂಡಿ ಇಲಾಖೆ ಎಂದರೇ ನೂರಕ್ಕೆ ಶೇ. 14 ಕಮಿಷನ್ ಪಡೆಯುವ ಇಲಾಖೆಯಾಗಿದೆ ಎಂದು ಆರೋಪಿಸಿದರು. ರಾಜ್ಯ ಉಳಿಯಬೇಕಾದರೇ ಆತ್ಮಸಾಕ್ಷಿಗೆ ಮತ ನೀಡಿ ಎಂದರು.

ಇದೆ ವೇಳೆ ಮಾಜಿ ಸಚಿವ ಎಚ್.ಡಿ. ರೇವಣ್ಣ, ಶಾಸಕರಾದ ಎಚ್.ಎಸ್. ಪ್ರಕಾಶ್, ಸಿ.ಎನ್. ಬಾಲಕೃಷ್ಣ, ಕೆ.ಎಂ. ಶಿವಲಿಂಗೇಗೌಡ, ಎಚ್.ಕೆ. ಕುಮಾರಸ್ವಾಮಿ, ದಕ್ಷಿಣ ಪದವಿದರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಕಂಠೇಗೌಡ, ಮಾಜಿ ಎಂಎಲ್‌ಸಿ ಮರಿತಿಬ್ಬೇಗೌಡ, ಕೆ.ಎಂ. ರಾಜೇಗೌಡ, ಜಾವಗಲ್ ರಾಜಶೇಖರ್, ಜಿಪಂ ಮಾಜಿ ಉಪಾಧ್ಯಕ್ಷ ಎಸ್. ದ್ಯಾವೇಗೌಡ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News