×
Ad

ಪೊಲೀಸರ ಬೇಡಿಕೆಗಳ ಈಡೇರಿಕೆಗೆ ದಸಂಸ ಒತ್ತಾಯ

Update: 2016-05-29 22:26 IST

 ತರೀಕೆರೆ, ಮೇ 29: ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಅಪರಾಧಗಳನ್ನು ತಡೆಗಟ್ಟುತ್ತ ಹಗಲು ರಾತ್ರಿ ಎನ್ನದೇ ಸಾರ್ವಜನಿಕರ ಹಿತ ರಕ್ಷಣೆಗೆ ಪ್ರಾಣದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಶ್ರಮ, ದಕ್ಷತೆಗೆ ಕರ್ನಾಟಕ ಪೊಲೀಸ್ ದೇಶದಲ್ಲಿಯೇ ಹೆಸರಾಗಿದೆ. ಪ್ರತಿನಿತ್ಯ ಎಲ್ಲರ ಕಷ್ಟಗಳಿಗೆ ಸ್ಪಂಧಿಸುವ ಇವರ ಕಷ್ಟಗಳನ್ನು ಕೇಳುವವರು ಮೂಕ ಪ್ರೇಕ್ಷಕರಾಗಿರುವುದು ವಿಷಾದನೀಯ ಎಂದು ದಸಂಸ ಜಿಲ್ಲಾ ಸಂಚಾಲಕ ಎನ್.ವೆಂಕಟೇಶ್ ತಿಳಿಸಿದ್ದಾರೆ

ಅವರು ರವಿವಾರ ಪಟ್ಟಣದ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ದೇವರಾಜ್ ರವರಿಗೆ ನೀಡಿರುವ ಮನವಿಯಲ್ಲಿ ಪೊಲೀಸರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರ ಏಳಿಗೆಗಾಗಿ ರಚಿಸಿರುವ ಧರ್ಮವೀರ ಆಯೋಗದ ವರದಿಯನ್ನು ಸರಕಾರ ಕೂಡಲೇ ಜಾರಿಗೊಳಿಸಬೇಕು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಮನೆ ಕೆಲಸಕ್ಕೆ ಪೇದೆಗಳನ್ನು ಬಳಸಬಾರದು, ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ತಿಳಿಸಿದರು.

ಆಂಧ್ರಪ್ರದೇಶ, ತಮಿಳುನಾಡು, ಬಿಹಾರದಂತಹ ಹೊರ ರಾಜ್ಯಗಳಲ್ಲಿ ಪೊಲೀಸರಿಗೆ ನೀಡುತ್ತಿರುವ ರೀತಿಯಲ್ಲಿಯೇ ಹೆಚ್ಚಿನ ವೇತನ ನೀಡಬೇಕು. ಹಬ್ಬಗಳಲ್ಲಿ ರಜೆಯನ್ನು ನೀಡಬೇಕು. ಪೊಲೀಸರಿಗೆ ಮೂಲಭೂತ ಸೌಲಭ್ಯಗಳೊಂದಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಜೂ. 4ರಂದು ನ್ಯಾಯಯುತ ಬೇಡಿಕೆ ಗಳನ್ನು ಮುಂದಿಟ್ಟು ಚಳವಳಿ ಮಾಡಲು ಮುಂದಾಗಿರುವ ಪೊಲೀಸರ ವಿರುದ್ಧ ಯಾವುದೇ ಶಿಸ್ತಿನ ಕ್ರಮ ಜರಗಿಸಬಾರದು. ಹಾಗೂ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ಮತ್ತು ಅನುಮತಿ ಕೇಳಿರುವ ಪೊಲೀಸ್ ಸಿಬ್ಬಂದಿಗೆ ಹಾಗೂ ಕುಟುಂಬಗಳ ಪ್ರಾಣ ಉಳಿಸುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ತಿಳಿಸಿದೆ.

ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಬಾಲರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News