‘ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ’
ಚಿಕ್ಕಮಗಳೂರು, ಮೇ 29: ಶ್ರೀಕತ್ರಿಮಾರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಭಗವತಿ ಗ್ರೂಪ್ ಬಳಗದ ವತಿಯಿಂದ ಭಕ್ತರಿಗೆ ಅನ್ನದಾನ ಮಾಡಲಾಯಿತು. ಬಸವನಹಳ್ಳಿ, ವಿಜಯಪುರ, ಕೆಂಪನಹಳ್ಳಿ, ಅರವಿಂದನಗರ ತಮಿಳು ಕಾಲನಿ ಮತ್ತಿತರ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಅನ್ನದಾನದಲ್ಲಿ ಪಾಲ್ಗೊಂಡಿದ್ದರು.
ಅನ್ನದಾನಕ್ಕೆ ಚಾಲನೆ ನೀಡಿದ ಸಿಡಿಎ ಅಧ್ಯಕ್ಷ ಡಿ.ಎಸ್.ಚಂದ್ರೇಗೌಡ ಮಾತನಾಡಿ, ಜೀವನದಲ್ಲಿ ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ ಎಂಬ ಗಾದೆ ಮಾತಿದೆ ಅದರಂತೆ ನಾವು ದುಡಿಯುವ ಹಣದಲ್ಲಿ ಒಂದಿಷ್ಟು ಭಾಗವನ್ನು ಅನ್ನದಾನದಂತಹ ಕಾರ್ಯಗಳಿಗೆ ನೀಡಿದರೆ ಸಹಕಾರಿಯಾಗುತ್ತದೆ ಎಂದರು.
ಪಟ್ಟಣ ಸಹಕಾರ ಬ್ಯಾಂಕ್ ನಿರ್ದೇಶಕ ಭಗವತಿ ಹರೀಶ್ ಮಾತನಾಡಿ, ಕಳೆದ ಮೂರು ವರ್ಷದಿಂದ ಕತ್ರಿಮಾರಮ್ಮ ದೇವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಅನ್ನದಾನ ಮಾಡುವ ಮೂಲಕ ಸಾರ್ವಜನಿಕ ಜೀವನದಲ್ಲಿ ಸಂಘ ತೊಡಗಿಸಿಕೊಂಡಿದೆ. ಮನುಷ್ಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಜನರ ಕಷ್ಟಸುಖದ ಅರಿವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿ.ಪಿ.ವಿಜಯ್‌ಕುಮಾರ್, ಕುರುವಂಗಿ ವೆಂಕಟೇಶ್, ಆಟೋ ಚಾಲಕರ ಸಂಘದ ಮಹೇಶ್, ರವಿ, ಮೋಹನ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.