×
Ad

ಆರೋಗ್ಯವಂತರಾಗಿರಲು ದೇಹದಂಡನೆ ಅಗತ್ಯ: ನರೇಂದ್ರ ಪೈ

Update: 2016-05-29 22:31 IST

ಚಿಕ್ಕಮಗಳೂರು, ಮೇ 29: ಜಿಲ್ಲೆ ದೇಹದಾರ್ಢ್ಯ ಸ್ಪರ್ಧೆಗೆ ಹೆಸರುವಾಸಿ. ಹಿಂದೆ ವ್ಯಾಯಾಮ ಶಾಲೆ, ಗರಡಿಮನೆ, ಕುಸ್ತಿ ಕೇಂದ್ರಗಳಿದ್ದವು. ಕಾಲ ಬದಲಾದಂತೆ ದೇಹ ದಂಡಿಸಲು ಜಿಮ್ ಎಂಬ ಹೊಸ ಕೇಂದ್ರಗಳು ಹುಟ್ಟಿದ್ದು, ಆರೋಗ್ಯವಂತರಾಗಿರಲು ದೇಹದಂಡನೆ ಸ್ಪರ್ಧೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದು ಹಿರಿಯ ಕ್ರೀಡಾಪಟು ಬಿ.ಎಚ್.ನರೇಂದ್ರ ಪೈ ಸಲಹೆ ನೀಡಿದ್ದಾರೆ.

ಅವರು ವಿಜಯಪುರದ ಜೆವಿಎಸ್ ಶಾಲೆ ಆವರಣದಲ್ಲಿ ರವಿವಾರ ಸಂಜೆ ಸರ್ವಶಕ್ತಿ ಯುವಕರ ಸಂಘ ಹಾಗೂ ಮಾರುತಿ ಮಲ್ಟಿಜಿಮ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಯುವಕರು ವ್ಯಾಯಾಮ, ಜಿಮ್ ಮತ್ತು ಈಜು ಮುಂತಾದ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡಲ್ಲಿ ರೋಗದಿಂದ ಮುಕ್ತರಾಗಬಹುದು, ನಗರದಲ್ಲಿ ಅತ್ಯಾಧುನಿಕ ಜಿಮ್ ಕೇಂದ್ರಗಳು ತಲೆ ಎತ್ತುತ್ತಿದ್ದು, ಇಂದಿನ ಯುವ ಪೀಳಿಗೆ ಇಂತಹ ಕೇಂದ್ರಗಳಲ್ಲಿ ದೇಹದಂಡನೆ ಮಾಡುವ ಮೂಲಕ ದಷ್ಟಪುಷ್ಟವಾಗಿ ಬೆಳೆಯಬೇಕು. ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟು ಎಚ್.ಕೆ.ವಸಂತಕುಮಾರ್ ಅವರನ್ನು ಗೌರವಿಸಲಾಯಿತು. ಮಾರುತಿ ಮಲ್ಟಿಜಿಮ್ ಮಾಲೀಕ ಎಚ್.ಎಲ್.ಸಂದೀಪ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಸಾದ್ ಅಮೀನ್, ತರಬೇತುದಾರ ರಾಬರ್ಟ್ ಏಸುದಾಸ್, ಬ್ರೈಟ್ ನ್ಯೂಟ್ರಿಶಿಯನ್‌ನ ದೀಪಕ್, ಸಂಗಮ್, ಮುಖಂಡರಾದ ಐ.ಡಿ.ಚಂದ್ರಶೇಖರ್, ಗಂಗಾಧರ್, ದಿಲೀಪ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News