ಕುರುಬ ಸಮುದಾಯ ಭವನಕ್ಕೆ 3 ಲಕ್ಷ ರೂ. ಅನುದಾನ: ಶಾಸಕ ಅಪ್ಪಚ್ಚು ರಂಜನ್
ಕುಶಾಲನಗರ, ಮೇ 29: ಕುಶಾಲ ನಗರದಲ್ಲಿ ಉತ್ತಮ ಗುಣಮಟ್ಟದ ಸುಸಜ್ಜಿತ ನೂತನ ಕುರುಬ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಸುಮಾರು 3 ಲಕ್ಷ ರೂ. ಅನುದಾನ ಒದಗಿಸುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭರವಸೆ ನೀಡಿದ್ದಾರೆ.
ಇಲ್ಲಿಗೆ ಸಮೀಪದ ಕೂಡಿಗೆಯ ರೈತ ಸಹಕಾರ ಭವನದಲ್ಲಿ ನೂತನ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕುರುಬ ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ರಾಷ್ಟ್ರಪ್ರೇಮಿ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ದಿಲ್ಲಿಯಲ್ಲಿ ಸ್ಥಾಪಿಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಕುರುಬ ಸಮಾಜದ ಸಂಘಟನಾ ಕಾರ್ಯದರ್ಶಿ ಕಳಕಪ್ಪಟಿ. ಬೆಟಗೇರಿ ಆಗ್ರಹಿಸಿದರು. ಕಾರ್ಯಕ್ರಮವನ್ನು ಮೈಸೂರು ಜಿಪ ಮಾಜಿ ಉಪಾಧ್ಯಕ್ಷ ಅಪ್ಪಾಜಿಗೌಡ ಉದ್ಘಾಟಿಸಿ ಮಾತನಾಡಿ, ಕುರುಬ ಸಮುದಾಯ ಸಂಘಟಿತರಾಗುವ ಮೂಲಕ ಸರಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ನೂತನ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯನ್ನುಲ್ಲ ಕಳಕಪ್ಪಟಿ. ಬೆಟಗೇರಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಟಿ.ಕೆ.ವಸಂತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕ ಮಂಡಳಿ ನಿರ್ದೇಶಕ ಎಂ. ಮುತ್ತಪ್ಪ, ಜಿಪಂ ಮಾಜಿ ಸದಸ್ಯ ವಿ.ಪಿ. ಶಶಿಧರ್. ಕೆ.ಕೆ. ಬೋಗಪ್ಪ, ಟಿ.ಪಿ. ಹಮೀದ್, ರತ್ನಾವತಿ, ಸಿ.ಕೆ. ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ವೇದಿಕೆಯ ಖಚಾಂಚಿ ಆರ್ ಪ್ರಭಾಕರ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಭರಮಣ್ಣ ಟಿ. ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು.