ಎಸ್ಸೆಮ್ಮೆಸ್ ಕಳುಹಿಸಿ: ಸಿಎಂ ಸ್ವಯಂ ಉದೊ್ಯೀಗ ಸೌಲಭ್ಯ ಪಡೆದುಕೊಳಿ್ಳ...
ರೇಣುಕೇಶ್ ಬಿ.
ಶಿವಮೊಗ್ಗ, ಮೇ 29: ಗ್ರಾಮೀಣ ಭಾಗದ ಬಡ, ಹಿಂದುಳಿದ, ಪರಿಶಿಷ್ಟ ಜಾತಿ-ಪಂಗಡಗಳ ಮಹಿಳೆಯರ ಶ್ರೇಯೋಭಿವೃದೀಗೆ ರಾಜ್ಯ ಸರಕಾರ ಹತ್ತು ಹಲವು ಸ್ವಯಂ ಉದ್ಯೋಗ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅದೆಷ್ಟೋ ಯೋಜನೆಗಳು ಮಾಹಿತಿಯ ಕೊರತೆ, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತಿತರ ಕಾರಣಗಳಿಂದಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಮಾಹಿತಿಯ ಕೊರತೆಯಿಂದಲೇ ಅರ್ಹ ಗ್ರಾಮೀಣ ಫಲಾನುಭವಿಗಳು ಸೌಲಭ್ಯದಿಂದ ವಂಚಿತವಾಗುವಂತಾಗಿದೆ. ಆದರೆ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಕೇಂದ್ರ (ಡಿ.ಐ.ಸಿ.) ಮಾತ್ರ ಇದಕ್ಕೆ ತದ್ವಿರುದ್ದವಾಗಿದೆ. ಗ್ರಾಮೀಣ ಭಾಗದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಜಾರಿಗೊಳಿಸಿರುವ ‘ಮುಖ್ಯಮಂತ್ರಿ ಸ್ವಯಂ ಉದ್ಯೋಗ ಸೃಜನ ಯೋಜನೆ’ (ಸಿಎಂಎಸ್‌ಇಜಿಪಿ)ಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿದೆ. ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ವಿನೂತನ ಮಾದರಿಯ ಪ್ರಚಾರ ಕಾರ್ಯಕ್ರಮಗಳನ್ನು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲು ಮುಂದಾಗಿದೆ. ಈ ಯೋಜನೆಯ ಬಗ್ಗೆ ಮಾಹಿತಿ ಅಗತ್ಯವಿರುವ ಗ್ರಾಮೀಣ ಭಾಗದ ಜನರು, ಇಲಾಖೆ ಪ್ರಕಟಿಸಿರುವ ಮೊಬೈಲ್ ಸಂಖ್ಯೆಗಳಿಗೆ ತಮ್ಮ ಸಂಕ್ಷಿಪ್ತ ಮಾಹಿತಿಯನ್ನೊಳಗೊಂಡ ಎಸ್‌ಎಂಎಸ್ ಕಳುಹಿಸಿದರೆ ಸಾಕು. ಈ ರೀತಿ ಎಸ್‌ಎಂಎಸ್ ಕಳುಹಿಸಿದವರ ತಾಲೂಕುವಾರು ಪಟ್ಟಿ ಸಿದ್ಧಪಡಿಸಿ, ಅವರವರ ತಾಲೂಕು ಕೇಂದ್ರಗಳಲ್ಲಿಯೇ ಮಾಹಿತಿ ಶಿಬಿರ ಆಯೋಜಿಸುವ ವ್ಯವಸ್ಥೆಯನ್ನೂ ಡಿ.ಐ.ಸಿ. ಅಧಿಕಾರಿಗಳು ಮಾಡಿದ್ದಾರೆ. ಶಿಬಿರದಲ್ಲಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ಯೋಜನಾ ವರದಿ ತಯಾರಿಸುವುದು ಹೇಗೆ, ಯಾವ ರೀತಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ, ಯಾವೆಲ್ಲಾ ಸ್ವಯಂ ಉದ್ಯೋಗಗಳಿಗೆ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು ಎಂಬಿತ್ಯಾದಿ ಸಮಗ್ರ ವಿವರಗಳನ್ನು ನೀಡಲಾಗುತ್ತದೆ. ಒಂದು ವೇಳೆ ಎಸ್‌ಎಂಎಸ್ ಸಂದೇಶ ಕಳುಹಿಸಲು ಸಾಧ್ಯವಾಗದವರು ಇಲಾಖೆಗೆ ಪತ್ರ ಮುಖೇನ ಅಥವಾ ಖುದ್ದಾಗಿ ಭೇಟಿಯಾಗಿ ಹೆಸರು ನೋಂದಾಯಿಸಿಕೊಳ್ಳುವ ವ್ಯವಸ್ಥೆಯನ್ನು ಡಿ.ಐ.ಸಿ. ಮಾಡಿದೆ.
ಉತ್ತಮ ಯೋಜನೆ:
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್.ಆರ್.ರಾಜಪ್ಪನವರನ್ನು ಪತ್ರಿಕೆ ಸಂಪರ್ಕಿಸಿದಾಗ, ಜಿಲ್ಲೆಯಾದ್ಯಂತ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಇಲಾಖೆಯ ವತಿಯಿಂದ ಈ ಬಾರಿ ಅರ್ಜಿ ಆಹ್ವಾನಿಸುವುದಕ್ಕಿಂತ ಮುಂಚಿತವಾಗಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಎಸ್‌ಎಂಎಸ್ ಕಳುಹಿಸುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಮೊಬೈಲ್ ಸಂಖ್ಯೆಗಳ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಯೋಜನೆಯ ಫೋಸ್ಟರ್ ಸಿದ್ಧಪಡಿಸಿ ಪ್ರತಿ ಗ್ರಾಪಂ ಕಚೇರಿ ವ್ಯಾಪ್ತಿಯಲ್ಲಿ ಪ್ರಚುರ ಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಎಲ್ಲ ತಾಲೂಕು ಕೇಂದ್ರಗಳಲ್ಲಿ ಮಾಹಿತಿ ಶಿಬಿರ ಆಯೋಜಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರು ಯೋಜನೆಯ ಸಮಗ್ರ ಮಾಹಿತಿ ಅರಿತು ಸೌಲಭ್ಯ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಹಾಗೆಯೇ ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಬೀಳುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
=ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ಯೋಗ ಪ್ರೋತ್ಸಾಹ, ಮುಖ್ಯಮಂತ್ರಿ ಸ್ವಯಂ ಉದ್ಯೋಗ ಸೃಜನ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ. ಇದು ಅತ್ಯಂತ ಮಹತ್ವದ ಯೋಜನೆಯಾಗಿದೆ. ಆದರೆ ಮಾಹಿತಿಯ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಮೀಣ ಭಾಗದ ಜನರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲಾಗುತ್ತಿಲ್ಲ. ಎಚ್.ಆರ್.ರಾಜಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ
ಯೋಜನೆಯ ವಿವರ
ಈ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ 10 ಲಕ್ಷ ರೂ. ವರೆಗೆ ಸಾಲಸೌಲಭ್ಯ ನೀಡಲಾಗುತ್ತದೆ. ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರಬೇಕು. 8 ನೆ ತರಗತಿ ಅಭ್ಯಾಸ ಮಾಡಿರಬೇಕು. ಸಾಮಾನ್ಯ ವರ್ಗದವರು 21 ವರ್ಷ ಮೇಲ್ಪಟ್ಟು 35 ವರ್ಷದೊಳಗಿರಬೇಕು. ಈ ವರ್ಗದವರಿಗೆ ಶೇ. 25 ರಷ್ಟು ಸಹಾಯಧನದ ಸೌಲಭ್ಯ ದೊರಕಲಿದೆ. ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಮಹಿಳೆಯರಿಗೆ 45 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಈ ವರ್ಗದವರಿಗೆ ಶೇ. 35 ರಷ್ಟು ಸಬ್ಸಿಡಿ ದೊರಕಲಿದೆ.