ಗೊಲ್ಲ ಸಮಾಜದ ಮೂಲಸಂಸ್ಕೃತಿ ಉಳಿಸಿ: ಶಾಸಕ ಕೆ.ಜಿ. ಬೋಪಯ್ಯ
ಮಡಿಕೇರಿ, ಮೇ 29 : ತಮ್ಮ ತಮ್ಮ ಸಮಾಜದಲ್ಲಿ ಒಗ್ಗಟ್ಟನ್ನು ಕಾಯ್ದುಕೊಳ್ಳುವ ಮೂಲಕ ಮಾತೃಭಾಷೆ ಹಾಗೂ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ.
ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೊಡಗು ಗೊಲ್ಲ ಸಮಾಜದ 6ನೆ ವರ್ಷದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮಾತೃಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಕೆಲಸಕ್ಕೆ ಸಮಾಜದ ಹಿರಿಯರು ನಾಂದಿ ಹಾಡಬೇಕು. ಜಾತಿ- ಜನಾಂಗದ ಬಂಧುಗಳು ಎಷ್ಟೇ ಸಣ್ಣ ಸಂಖ್ಯೆಯಲ್ಲಿದ್ದರೂ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ವಿಭಿನ್ನವಾದ ಸಂಸ್ಕೃತಿಯ ಬಗ್ಗೆ ಅಭಿಮಾನ ಹೊಂದಿರಬೇಕೆಂದು ಸಲಹೆ ನೀಡಿದರು. ಕೊಡಗು ಜಿಲ್ಲೆಯಲ್ಲಿ ಗೊಲ್ಲ ಜನಾಂಗದ ಸಂಖ್ಯೆ ಕಡಿಮೆ ಇದ್ದರೂ ಕಳೆದ 6 ವರ್ಷಗಳಿಂದ ಕ್ರೀಡಾಕೂಟದ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದ ಶಾಸಕರು, ಮುಂದಿನ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕೊಡಗು ಜಿಲ್ಲಾ ಗೊಲ್ಲ ಸಮಾಜದ ಅಧ್ಯಕ್ಷ ಎ.ಎಸ್.ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಟಿ.ಪಿ. ರಮೇಶ್, ನಿವೃತ್ತ ಮುಖ್ಯ ಶಿಕ್ಷಕಿ ಕೊಂಗೀರ ಗೌರಮ್ಮ, ಬೆಂಗಳೂರಿನ ವಿಂಡ್ಸ್ ಮಾಸ್ ಕಮ್ಯುನಿಕೇಷನ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಚೋಕಿರ ಜಯಂತಿ ಬೆಳ್ಯಪ್ಪ, ಕಾಫಿ ಬೆಳೆಗಾರ ಪೊಂಗೆರ ಲೋಕೇಶ್ ಅಪ್ಪಣ್ಣ, ಬೆಂಗಳೂರಿನ ಸಿವಿಲ್ ಇಂಜಿನಿಯರ್ ಅರೆಯಂಡ ಶರೀನ್ ಪ್ರಭಾಕರ್, ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ. ಇಸ್ಮಾಯೀಲ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.