ಮೂರುದಿನಗಳ ಇಎನ್‌ಟಿ ರಾಷ್ಟ್ರೀಯ ಸಮಾವೇಶಕ್ಕೆ ತೆರೆ
ಮಡಿಕೇರಿ ಮೇ 29: ಕೊಡಗು ಜಿಲ್ಲಾ ಇಎನ್‌ಟಿ ಅಸೋಸಿಯೇಷನ್ ಮತ್ತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ರಾಷ್ಟ್ರೀಯ ಮಟ್ಟದ ಕಿವಿ, ಮೂಗು ಮತ್ತು ಗಂಟಲು ತಜ್ಞರ ಸಮಾವೇಶ ಮೂರು ದಿನಗಳ ಕಾಲ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆಯಿತು.
ರಾಷ್ಟ್ರೀಯ ಸಮಾವೇಶಕ್ಕೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 320 ಕ್ಕೂ ಹೆಚ್ಚಿನ ತಜ್ಞ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಮೇ 27 ರಿಂದ ಆರಂಭಗೊಂಡ ಸಮಾವೇಶದಲ್ಲಿ ಇಎನ್‌ಟಿಗೆ ಸಂಬಂಧಿಸಿದ ಚಿಕಿತ್ಸೆಯಲ್ಲಿನ ಆಧುನಿಕ ಪದ್ಧತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಲಾಯಿತು.
ಕ್ಯಾಪಿಟಲ್ ವಿಲೇಜ್, ಮಡಿಕೇರಿಯಿಂದ ಅಂದಾಜು 7 ಕಿ.ಮೀ. ದೂರದಲ್ಲಿದೆ. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸಮಾವೇಶದ ಹಿನ್ನೆಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ಒದಗಿಸಿಕೊಡುವ ನಿಟ್ಟಿನಲ್ಲಿ ತಜ್ಞ ವೈದ್ಯರಿಂದ ನಡೆದ 6 ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯನ್ನು ಕ್ಯಾಪಿಟಲ್ ವಿಲೇಜ್ ಸಮಾವೇಶದಲ್ಲಿ ನೇರ ಪ್ರಸಾರ ಮಾಡಲಾಗಿತ್ತು.
ಇಎನ್‌ಟಿ ಅಸೋಸಿಯೇಷನ್‌ನ ಕೊಡಗು ಜಿಲ್ಲಾ ಘಟಕ ಮುಂಬರುವ ದಿನಗಳಲ್ಲಿ ನಗರದ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ವಿವಿಧ ಶಸ್ತ್ರ ಚಿಕಿತ್ಸಾ ಶಿಬಿರ, ಕಾರ್ಯಾಗಾರ ನಡೆಸುವ ಗುರಿಯನ್ನು ಹೊಂದಿದೆ.
ಸಮಾವೇಶದಲ್ಲಿ ತಜ್ಞ ವೈದ್ಯರ ಉಪನ್ಯಾಸ ಕಾರ್ಯಕ್ರಮಗಳೊಂದಿಗೆ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ರಾಷ್ಟ್ರೀಯ ಇಎನ್‌ಟಿ ಅಧ್ಯಕ್ಷ ಸಂಜೋತ್ ಅಗರ್‌ವಾಲ್, ಹಾಲಿ ಅಧ್ಯಕ್ಷ ದೀಪಕ್ ಹಳದೀಪುರ್, ವಾರ್ತಾಪತ್ರಿಕೆ ಸಂಪಾದಕ ಸತ್ಯಪ್ರಕಾಶ್ ದುಬಾಲ್, ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಹರಿಹರ ಮೂರ್ತಿ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಅಪ್ಪಾಜಿ ಮತ್ತಿತರರು ಉಪಸ್ಥಿತರಿದ್ದರು.