×
Ad

ಆರಗ ಸಮೀಪದ ಹಿರೇಗದ್ದೆಯಲ್ಲಿ ಶಿಲಾಸಮಾಧಿ ಪತ್ತೆ

Update: 2016-05-30 22:07 IST

ತೀರ್ಥಹಳ್ಳಿ, ಮೇ 30: ತಾಲೂಕಿನ ಆರಗ ಸಮೀಪದ ಹಿರೇಗದ್ದೆಯಲ್ಲಿ ಶಿಲಾಯುಗದ ಶಿಲಾ ಸಮಾಧಿಗಳು ಪತ್ತೆಯಾಗಿದ್ದು, ಇಲ್ಲಿನ ಹಿರೇಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ನೆಡುತೋಪಿನೊಳಗೆ ಈ ಸಮಾಧಿಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ ಎಂದು ಸಂಶೋಧಕ ಎಲ್.ಎಸ್. ರಾಘವೇಂದ್ರ ತಿಳಿಸಿದ್ದಾರೆ. 50ಮೀ. ಅಂತರದಲ್ಲಿರುವ ಈ ಶಿಲಾ ಸಮಾಧಿಗಳು ತಾಲೂಕಿನ ಈ ಭಾಗದಲ್ಲಿ ಮೊದಲಬಾರಿಗೆ ಪತ್ತೆಯಾಗಿವೆ. ನೆಡುತೋಪು ಬೆಳೆಸಲಾಗಿದ್ದರಿಂದ ಇವು ಬೆಳಕಿಗೆ ಬಂದಿರಲಿಲ್ಲ. ನೆಡುತೋಪು ನೆಡುವ ಸಂದರ್ಭದಲ್ಲಿ ಕೆಲವು ಶಿಲಾ ಸಮಾಧಿಗಳು ನಾಶವಾಗಿರುವ ಸಾಧ್ಯತೆಗಳಿದೆ. ಈ ಪ್ರದೇಶದಲ್ಲಿ ಸಂಶೋಧನೆ ನಡೆಸಿದರೆ ಶಿಲಾ ಸಮಾಧಿಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಶಿಲಾ ಸಮಾಧಿಗಳು ಸುಮಾರು 2000 ವರ್ಷಗಳಷ್ಟು ಹಳೆಯದಾಗಿದೆ. ಕಬ್ಬಿಣದ ಯುಗದ ಮಾನವರು ನಿರ್ಮಿಸಿರುವ ಶಿಲಾ ಸಮಾಧಿಗಳು ಇದಾಗಿವೆ ಎಂದು ಬೆಂಗಳೂರಿನ ಶಾಸನ ತಜ್ಞ ಪ್ರೊ. ಜಿ.ಕೆ. ದೇವರಾಜ್ ಅಭಿಪ್ರಾಯಪಟ್ಟಿದ್ದಾರೆ. ಕಬ್ಬಿಣದ ಯುಗದ ಮಾನವರು ನಿರ್ಮಿಸಿರುವ ಈ ಶಿಲಾ ಸಮಾಧಿಗಳಲ್ಲಿ ಮಾನವರು ಶವಗಳನ್ನು ಶಿಲಾ ತೊಟ್ಟಿಗಳಲ್ಲಿಟ್ಟು ಹೂತು ಕಬ್ಬಿಣದ ಆಯುಧ, ಮಡಿಕೆ, ಮಣಿ ಇತ್ಯಾದಿಗಳನ್ನು ಜೊತೆಯಲ್ಲಿರಿಸಿ ಬೃಹತ್ ಕಲ್ಲು ಚಪ್ಪಡಿಗಳನ್ನು ಮುಚ್ಚುತ್ತಿದ್ದರು. ಕೆಲವೆಡೆ ಒರಟಾದ, ಎತ್ತರವಾದ ನೆಡುಗಲ್ಲುಗಳನ್ನು ನಿಲ್ಲಿಸುತ್ತಿದ್ದರು. ಈಗ ಪತ್ತೆಯಾಗಿರುವ ಸ್ಥಳದಲ್ಲಿ ಚಪ್ಪಟೆಯಾದ ನಿಲಿಸಿದ ಕಲ್ಲು ಕೂಡ ಇದೆ. ಮತ್ತೊಂದು ಉರುಟಾದ ಕಲ್ಲು ನೆಲದಿಂದ ಸುಮಾರು ಏಳು ಅಡಿಯಷ್ಟು ಎತ್ತರವಾಗಿದೆ.

 ಈ ಪ್ರದೇಶದ ಸುತ್ತಮುತ್ತಲಿನ ಹೆಚ್ಚಿನ ಅಧ್ಯಯನದಿಂದ ಆದಿಮಾನವರು ಬಳಸುತ್ತಿದ್ದ ಶಿಲಾಯುಧ ಮೊದಲಾದ ವಸ್ತುಗಳು ದೊರೆಯುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News