ಫೇಸ್‌ಬುಕ್ ತಂಡದಿಂದ ಮರಳು ಶಿಲ್ಪ ರಚನೆ
ಕಾರವಾರ, ಮೇ 30: ತಂಬಾಕು ವಿರೋಧಿ ಜಾಗೃತಿಗಾಗಿ ಫೇಸ್‌ಬುಕ್ ತಂಡದ ಸದಸ್ಯರು ಕಾರವಾರದ ಕಡಲ ತೀರದ ಮರಳಿನಲ್ಲಿ ತಂಬಾಕು ವಿರೋಧಿ ಮರಳು ಶಿಲ್ಪ ರಚಿಸುವ ಮೂಲಕ ಜಾಗೃತಿ ಹಾಗೂ ಪ್ರವಾಸಿಗರಿಗೆ ಮನರಂಜನೆ ನೀಡಿದರು.
ಕಲಾ ಕಲರವ ಎಂಬ ಫೇಸ್ ಬುಕ್ ಗ್ರೂಪ್‌ನ ಸದಸ್ಯರು ಈ ಕಲಾ ಕೃತಿಯನ್ನು ರಚಿಸಿದ್ದು, ಫೈನ್‌ಆರ್ಟ್ ಪದವೀಧರರಾಗಿರುವ ಅಂಕೋಲಾ ಮೂಲದ ಕಲಾವಿದ ಕುಮಾರ ಮಹೇಶ್ ಮರಳು ಶಿಲ್ಪ ಕಲೆಯಲ್ಲಿ ಆಸಕ್ತಿ ಇರುವವರನ್ನು ಸೇರಿಸಿ ಗುಂಪು ರಚಿಸಿಕೊಂಡು ಸಾಮಾಜಿಕ ಕ್ರಾಂತಿಯಲ್ಲಿ ತೊಡಗಿಕೊಂಡಿದ್ದಾರೆ.
ವಿವಿಧ ಸಂದೇಶ ಸಾರುವ ಮರಳು ಶಿಲ್ಪಗಳನ್ನು ಕಾರವಾರ ಟ್ಯಾಗೋರ್ ಕಡಲ ತೀರದಲ್ಲಿ ರಚಿಸುತ್ತಿದ್ದಾರೆ. ಈ ಶಿಲ್ಪಗಳು ಕಡಲ ತೀರಕ್ಕೆ ಬರುವ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯ ಜೊತೆಗೆ ಪರಿಸರ, ಸಂಸ್ಕ್ರತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ನೀತಿ ಪಾಠವನ್ನು ಸಾರಿ ಹೇಳುತ್ತವೆ.
ತಂಬಾಕು ವಿರೋಧಿ ಜಾಗೃತಿಕಲಾಕೃತಿ ರಚನೆಯಲ್ಲಿ ಕಲಾವಿದ ಕುಮಾರ ಮಹೇಶ ಅವರೊಂದಿಗೆ ರಾಜಸ್ಥಾನದ ವಿಕಾ ಕುಮಾರ ಓಝಾ, ಹೈದರಾಬಾದ್‌ನ ಸುರೇಶ ಚೌಧರಿ, ಪಶ್ಚಿಮ ಬಂಗಾಳದ ಪ್ರಸನ್ನಜಿತ್, ಯಲ್ಲಾಪುರದ ಗುರುಪ್ರಸಾದ ಗೋಕುಲ್ ಸಹಕರಿಸಿದ್ದರು.