ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ
ಶಿವಮೊಗ್ಗ, ಮೇ 30: ಜಿಲ್ಲೆಯ ಸೊರಬ ತಾಲೂಕಿನ ಶಕುನವಳ್ಳಿ ಸಮೀಪದ ಕಲ್ಲಂಡೆ ಗ್ರಾಮದಲ್ಲಿ ನಾಲ್ವರಲ್ಲಿ ಡೆಂಗ್ ಜ್ವರ ಕಾಣಿಸಿಕೊಂಡಿದೆ. ಜ್ವರಕ್ಕೆ ತುತ್ತಾದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಪ್ರಸ್ತುತ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿಯವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಕಲ್ಲಂಡೆ ಗ್ರಾಮದಲ್ಲಿ ಇತ್ತೀಚೆಗೆ ಏಳೆಂಟು ಜನರು ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿತ್ತು. ಪರೀಕ್ಷೆಯಲ್ಲಿ ನಾಲ್ವರು ಡೆಂಗ್ ಜ್ವರ ಬಾಧೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಇವರನ್ನು ಸಾಗರ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿತ್ತು. ಡೆಂಗ್ ಜ್ವರಕ್ಕೆ ತುತ್ತಾದ ಎಲ್ಲರೂ ಇದೀಗ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕಲ್ಲಂಡೆ ಗ್ರಾಮದಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಆರೋಗ್ಯ ಶಿಬಿರ ಆಯೋಜಿಸುವುದರ ಜೊತೆಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗಿದೆ. ಪ್ರಸ್ತುತ ಈ ಗ್ರಾಮದಲ್ಲಿ ಯಾವುದೇ ಹೊಸ ಡೆಂಗ್ ಪ್ರಕರಣಗಳು ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು, ಆರಗ ಮೊದಲಾದೆಡೆ ಕೆಲವರು ಶಂಕಿತ ಕೆಎಫ್‌ಡಿ (ಮಂಗನ ಕಾಯಿಲೆ)ಯಿಂದ ಬಳಲುತ್ತಿದ್ದರು. ಇವರ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ ವೇಳೆ, ಮಂಗನ ಕಾಯಿಲೆ ಇಲ್ಲದಿರುವುದು ತಿಳಿದುಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಳೆದ ವರ್ಷ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ 140 ಕೆ.ಎಫ್.ಡಿ. ಪ್ರಕರಣಗಳು ಪತ್ತೆಯಾಗಿದ್ದವು. ಪ್ರಸ್ತುತ ವರ್ಷ ಇಲ್ಲಿಯವರೆಗೂ ಕೇವಲ 12 ಪ್ರಕರಣಗಳು ವರದಿಯಾಗಿವೆ. ಕಾಯಿಲೆಯು ಸಂಪೂರ್ಣ ನಿಯಂತ್ರಣದಲ್ಲಿದೆ. ಇಲಾಖೆಯು ಈ ಎರಡೂ ತಾಲೂಕು ವ್ಯಾಪ್ತಿಗಳಲ್ಲಿ ಕೆಎಫ್‌ಡಿ ರೋಗದ ಬಗ್ಗೆ ನಿರಂತರವಾಗಿ ಜಾಗೃತಿ ಅಭಿಯಾನ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದು ಇದೇ ಸಂದರ್ಭದಲ್ಲಿ ಡಾ. ರಾಜೇಶ್ ಸುರಗೀಹಳ್ಳಿಯವರು ತಿಳಿಸಿದ್ದಾರೆ.