×
Ad

ಪೊಲೀಸರ ಪ್ರತಿಭಟನೆಗೆ ವಿವಿಧ ಸಂಘಟನೆಗಳ ಬೆಂಬಲ

Update: 2016-05-30 22:13 IST

ಮೂಡಿಗೆರೆ, ಮೇ 30: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜೂ. 4ರಂದು ರಾಜ್ಯಾದ್ಯಂತ ಕರ್ತವ್ಯಕ್ಕೆ ರಜೆ ಹಾಕಿ ಪ್ರತಿಭಟನೆ ನಡೆಸುತ್ತಿರುವ ಪೊಲೀಸರಿಗೆ ಬೆಂಬಲ ನೀಡುವುದಾಗಿ ಸಿಪಿಐ ಕಾರ್ಯದರ್ಶಿ ದೇವರುಂದ ರವಿ ಹೇಳಿದ್ದಾರೆ.

ಅವರು ಸೋಮವಾರ ಇಲ್ಲಿನ ಲ್ಯಾಂಪ್ಸ್ ಸೊಸೈಟಿ ಕಟ್ಟಡದಲ್ಲಿ ವಿವಿಧ ಸಂಘಟನೆಗಳ ಹಾಗೂ ಪಕ್ಷಗಳ ಮುಖಂಡರು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೊಲೀಸರಿಗೆ ಸರಿಯಾದ ವೇತನ ದೊರೆಯುತ್ತಿಲ್ಲ, ಒಟ್ಟು 19ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಕರ್ತವ್ಯಕ್ಕೆ ರಜೆ ಹಾಕಿ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಅಂದು ಸಿಪಿಐ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಜತೆಗೂಡಿ ಪೊಲೀಸರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ನಾಗೇಶ್ ಪಟ್ಟದೂರು ಮಾತನಾಡಿ, ಪೊಲೀಸರು ಸಹ ಎಲ್ಲರಂತೆ ಮಾನವರೇ ಆಗಿದ್ದು, ಅವರಿಗೂ ಹಕ್ಕುಗಳಿವೆ. ದಿನದ 24ಗಂಟೆಯೂ ಜನರ ರಕ್ಷಣೆ ದೃಷ್ಟಿಯಿಂದ ದುಡಿಯುವ ಪೊಲೀಸರ ದುಃಖವನ್ನು ಸರಕಾರ ಆಲಿಸುತ್ತಿಲ್ಲ. ಹಿರಿಯ ಅಧಿಕಾರಿಗಳ ಜೀತದಾಳುಗಳಾಗಿ ಬಳಸಲಾಗುತ್ತಿದೆ. ಸರಕಾರ ಈ ಬಗ್ಗೆ ತಾತ್ಸಾರ ನೀತಿ ಅನುಸರಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜೆಎಸ್‌ಎಸ್ ವಕ್ತಾರ ಎಸ್.ಎ.ವಿಜೇಂದ್ರ ಮಾತನಾಡಿ, ಒಂದು ವೇಳೆ ಎಸ್ಮಾ ಕಾಯ್ದೆ ಜಾರಿ ಮಾಡಿದರೆ ಜನ ಸುಮ್ಮನೆ ಕುಳಿತು ನೋಡುವುದಿಲ್ಲ. ಸರಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಪೊಲೀಸರ ಪ್ರತಿಭಟನೆ ದಿನಕ್ಕಿಂತ ಮುನ್ನವೇ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಸರಕಾರ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯ ನಂತರ ತಾಲೂಕು ಕಚೇರಿಗೆ ತೆರಳಿದ ಮುಖಂಡರು ತಹಶೀಲ್ದಾರ್ ಮತ್ತು ವೃತ್ತ ನಿರೀಕ್ಷರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಜೂ. 4ಕ್ಕೂ ಮುನ್ನವೇ ಬೇಡಿಕೆ ಈಡೇರಿಕೆ ಮಾಡುವಂತೆ ಮನವಿ ಸಲ್ಲಿಸಿದರು.

ಗೋಷ್ಠಿಯಲ್ಲಿ ಕರವೇ ಮುಖಂಡ ಬಾಲು, ಎಚ್.ಆರ್.ಪುಟ್ಟಸ್ವಾಮಿ, ಯೋಗೇಶ್, ರೈತ ಸಂಘದ ಲಕ್ಷ್ಮಣಗೌಡ, ಹಳೆಕೆರೆ ರಘು, ಸಂಗಮಾಪುರ ರಾಜು, ಹುಲ್ಲೇಮನೆ ಚಂದ್ರೇಗೌಡ, ಮುಂಡಾಲ ಸಮಾಜದ ತಾಲೂಕು ಅಧ್ಯಕ್ಷ ಬಾಳೂರು ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News