‘ಮಕ್ಕಳು ಭವಿಷ್ಯದಲ್ಲಿ ಪ್ರಜ್ವಲಿಸಲು ನರ್ಸರಿ ಶಿಕ್ಷಣ ಅಗತ್ಯ’
ಚಿಕ್ಕಮಗಳೂರು, ಮೇ 30: ಮಕ್ಕಳು ಭವಿಷ್ಯದಲ್ಲಿ ಪ್ರಜ್ವಲಿಸಲು ಆರಂಭಿಕವಾದ ನರ್ಸರಿ ಶಿಕ್ಷಣದ ಗುಣಮಟ್ಟ ಅಗತ್ಯವಾಗಿದ್ದು, ಶಿಕ್ಷಕರು ಪೋಷಕರ ಸ್ಥಾನವನ್ನು ತುಂಬಿದಾಗ ಮಾತ್ರ ಸಹಕಾರಿಯಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ತಿಳಿಸಿದ್ದಾರೆ.
ಅವರು ಸೋಮವಾರ ನಗರದ ಜಯನಗರ ಬಡಾವಣೆಯಲ್ಲಿ ನೂತನವಾಗಿ ಆರಂಭವಾದ ಕನಸು ಕಿಡ್ಸ್ ಶಾಲೆಯನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಶಿಕ್ಷಣ ದುಬಾರಿಯಾಗಿದ್ದು, ಬಡವರಿಗೆ ಬಿಸಿತುಪ್ಪವಾಗಿ ಪರಿಣಮಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಕೆಲವು ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣದ ಕೇಂದ್ರ ಬಿಂದುವಾಗಿದೆ. ವ್ಯಾಪಾರಿ ಮನೋಭಾವ ಬಿಟ್ಟು ಸೇವಾ ಮನೋಭಾವದಿಂದ ನಡೆದಾಗ ಸಮಾಜದಲ್ಲಿ ಉತ್ತಮ ಹೆಸರುಗಳಿಸಿ ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಈ ಸಂಸ್ಥೆ ಬಡವರಿಗೆ ಹೊರೆಯಾಗದ ರೀತಿ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡುವ ಜೊತೆ ಪೋಷಕರ ಸ್ಥಾನವನ್ನು ತುಂಬಿ ಪ್ರೀತಿ ವಿಶ್ವಾಸ ಗಳಿಸಿ ಹೆಸರುವಾಸಿಯಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಪ್ರಾಂಶುಪಾಲೆ ಮಮತಾ ಮಾತನಾಡಿ, ಗುಣಮಟ್ಟದ ಶಿಕ್ಷಣದೊಂದಿಗೆ ದೇಶಿ ಸಂಸ್ಕೃತಿಯನ್ನು ಹೇಳಿಕೊಟ್ಟು ಪ್ರೀತಿ ವಿಶ್ವಾಸದ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕನಸನ್ನು ನನಸು ಮಾಡುವ ದೃಷ್ಟಿಹೊಂದಿ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಬಸವರಾಜು, ರಾಜಪ್ಪ, ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.