‘ಉತ್ತಮ ಆರೋಗ್ಯ ಸೌಲಭ್ಯಗಳಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ’
ಚಿಕ್ಕಮಗಳೂರು, ಮೇ 30: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯಗಳು ದೊರೆತರೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಷಡಕ್ಷರಿಸ್ವಾಮಿ ಹೇಳಿದ್ದಾರೆ.
ಅವರು ರೋಟರಿ ಕಾಫಿಲ್ಯಾಂಡ್ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಸಹಯೋಗದೊಂದಿಗೆ ಎಂಇಎಸ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಉಚಿತ ವೈದ್ಯಕೀಯ ಬೃಹತ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಯಂ ಸೇವಾ ಸಂಸ್ಥೆಗಳು ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಅಮಿತ್, ಡಾ.ಗೌತಮ್, ಡಾ.ಲಕ್ಷ್ಮೀಪತಿ, ಡಾ.ಆಕಾಶ್‌ಬಾಬು, ಡಾ.ರೈನಾ ಸೇರಿದಂತೆ 17 ವೈದ್ಯರನ್ನೊಳಗೊಂಡ 31ಜನರ ತಂಡ 550ಕ್ಕೂ ಹೆಚ್ಚು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿತು. ಕೆಲವು ಕಾಯಿಲೆಗಳಿಗೆ ಉಚಿತವಾಗಿ ಔಷಧಿಗಳನ್ನು ನೀಡಲಾಯಿತು. ಹೆಚ್ಚಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಅಗತ್ಯವಿರುವ ಸುಮಾರು 200ರೋಗಿಗಳಿಗೆ ಕೆಂಪು ಕಾರ್ಡ್‌ಗಳನ್ನು ಶಿಬಿರದಲ್ಲಿ ವಿತರಿಸಲಾಯಿತು. ಕಾರ್ಡ್ ಹೊಂದಿದವರಿಗೆ ಮಂಗಳೂರು ಆಸ್ಪತ್ರೆಯಲ್ಲಿ ರಿಯಾಯಿತಿ ನೀಡುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಹೇಳಿದ್ದು, ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ಚಿಕಿತ್ಸೆಯ ಭರವಸೆ ನೀಡಿದೆ ಎಂದು ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ಎಸ್.ಎನ್.ಸಚ್ಚಿದಾನಂದ ತಿಳಿಸಿದರು. ಉಪಾಧ್ಯಕ್ಷ ಆರ್.ನಾಗೇಂದ್ರ, ಖಜಾಂಚಿ ಎನ್.ಎಸ್.ನಾಗೇಂದ್ರ, ಸದಸ್ಯರಾದ ಡಾ.ಶ್ರೀಧರ್, ಡಾ.ವಿಮಲ್‌ಜೈನ್, ಡಾ.ಶೇಷಾದ್ರಿ, ಮಾಜಿ ಅಧ್ಯಕ್ಷ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರ ನಿರ್ದೇಶಕ ಡಾ.ಎಂ.ಜೆ.ಸೂರಜ್ ಸ್ವಾಗತಿಸಿ, ಕಾರ್ಯದರ್ಶಿ ವಿವೇಕ್ ವಂದಿಸಿದರು.