ಬಗರ್‌ಹುಕುಂ ಬಾಕಿ ಅರ್ಜಿ ಶೀಘ್ರ ವಿಲೇವಾರಿಗೆ ಕಾಗೋಡು ಸೂಚನೆ
ಸಾಗರ, ಮೇ 30: ತಾಲೂಕಿನಲ್ಲಿ ಬಗರ್‌ಹುಕುಂ ಸಮಿತಿ ರಚನೆಯಾಗಿ ಮೂರು ವರ್ಷಗಳು ಕಳೆದಿದೆ. ಈತನಕ 1, 600 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ 2 ಸಾವಿರ ಅರ್ಜಿಗಳು ಬಾಕಿ ಇದೆ. ಅವುಗಳ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಈ ಸಾಲಿನ ಡಿಸೆಂಬರ್‌ನ ಒಳಗಾಗಿ ಅವರಿಗೂ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿ ನೇಮಕರಾದ ಬಿ.ಆರ್. ಜಯಂತ್ ಅವರನ್ನು ಅಭಿನಂದಿಸಿ ಮಾತನಾಡುತ್ತಿದ್ದರು. ಹಿಂದೆ ಬಗರ್‌ಹುಕುಂ ಯೋಜನೆಯಡಿ ಸಾಕಷ್ಟು ಜನರಿಗೆ ಹಕ್ಕುಪತ್ರ ನೀಡಲಾಗಿತ್ತು. ಹಿಂದಿನ ಸರಕಾರ ಜಾರಿಗೆ ತಂದ ಯೋಜನೆಯಿಂದ ಈಗ ಸಲೀಸಾಗಿ ಭೂಮಿ ನೀಡಲಾಗುತ್ತಿಲ್ಲ. ಕಾನೂನು, ಸೊಪ್ಪಿನ ಬೆಟ್ಟ ಇತ್ಯಾದಿ ತೊಡಕಿನ ಜೊತೆಗೆ ಪರಿಭಾವಿತ ಅರಣ್ಯ ಎಂಬ ಹಣೆಪಟ್ಟಿ ಅಂಟಿ ಕೊಂಡಿದೆ. ಇದರಿಂದ ಸಾಕಷ್ಟು ಜನರಿಗೆ ಹಕ್ಕುಪತ್ರ ನೀಡಲಾಗುತ್ತಿಲ್ಲ. ಜೂನ್ ಅಥವಾ ಜುಲೈನಲ್ಲಿ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಈ ಕಾಯ್ದೆ ತಿದ್ದುಪಡಿಗೆ ಪ್ರಯತ್ನ ನಡೆಸಲಾಗುತ್ತದೆ ಎಂದು ತಿಳಿಸಿದರು. ಬಗರ್‌ಹುಕುಂ ಯೋಜನೆಗೆ ಸಂಬಂಧಪಟ್ಟಂತೆ ಆವಿನಹಳ್ಳಿ ವ್ಯಾಪ್ತಿಯಲ್ಲಿ 338, ಆನಂದಪುರಂ ವ್ಯಾಪ್ತಿಯಲ್ಲಿ 349, ಕಸಬಾ ವ್ಯಾಪ್ತಿಯಲ್ಲಿ 380, ತಾಳಗುಪ್ಪ ಪ್ರದೇಶದಲ್ಲಿ 369, ಭಾರಂಗಿಯಲ್ಲಿ 238 ಅರ್ಜಿಗಳು ಬಾಕಿ ಇವೆ. ಅವುಗಳನ್ನು ಸಂಬಂಧಪಟ್ಟ ಹೋಬಳಿಯ ರೆವಿನ್ಯೂ ಇನ್‌ಸ್ಪೆಕ್ಟರ್ ಹಾಗೂ ಗ್ರಾಮಲೆಕ್ಕಿಗರು ಪರಿಶೀಲನೆ ನಡೆಸಿ, ಅಂತಿಮ ಪಟ್ಟಿ ತಯಾರಿಸುವಂತೆ ಕಾಗೋಡು ಸೂಚನೆ ನೀಡಿದರು. ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಬಿ.ಆರ್. ಜಯಂತ್, ಭೂಮಿ ಕೊಡುವ ವಿಷಯದಲ್ಲಿ ಕಾಗೋಡು ತಿಮ್ಮಪ್ಪಅವರು ಕರ್ಮಯೋಗಿ. ಭೂಸುಧಾರಣಾ ಕಾಯ್ದೆ ಜಾರಿಯಿಂದ ಈತನಕ ಕಾಗೋಡು ತಿಮ್ಮಪ್ಪಅವರು ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ ಭೂಮಿ ಕೊಡುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ಅವರ ಮಾರ್ಗದರ್ಶನದಲ್ಲಿ ಬಗರ್‌ಹುಕುಂ ಸಮಿತಿ ಅಧ್ಯಕ್ಷನಾಗಿ ಜನರಿಗೆ ಭೂಮಿ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತೇನೆ. ಮುಂದಿನ ಮೂರ್ನಾಲ್ಕು ತಿಂಗಳ ಒಳಗಾಗಿ ಶೇ. 50ರಷ್ಟು ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಗಮನ ಹರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬಗರ್‌ಹುಕುಂ ಸಮಿತಿ ನೂತನ ಸದಸ್ಯ ಚಂದ್ರಕಾಂತ ಆರೋಡಿ, ಲಿಂಗರಾಜು, ತಹಶೀಲ್ದಾರ್ ಎನ್.ಟಿ. ಧರ್ಮೊಜಿರಾವ್ ಉಪಸ್ಥಿತರಿದ್ದರು.