×
Ad

ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಗ್ರಾಪಂಗೆ ಮುತ್ತಿಗೆ

Update: 2016-05-31 22:04 IST

 ಕಾರವಾರ, ಮೇ 31: ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಶಿರವಾಡ ಗ್ರಾಮ ಪಂಚಾಯತ್‌ಗೆ ಸುತ್ತಲಿನ ಗ್ರಾಮದ ಮಹಿಳೆಯರು ಮುತ್ತಿಗೆ ಹಾಕಿದರು. ಕಳೆದ ಒಂದು ತಿಂಗಳಿನಿಂದ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಿಷ್ಕಾಳಜಿ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಂಡಸ್ಟ್ರೀಯಲ್ ಕಾಲನಿಯ ಜನ ನೀರು ತರಬೇಕು ಎಂದರೆ ಹರಸಾಹಸ ಪಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 150 ಕ್ಕೂ ಹೆಚ್ಚು ಮನೆಗಳಿದ್ದು, ನೀರು ಸರಿಯಾಗಿ ಪೂರೈಕೆಯಾಗದ ಕಾರಣ ಇಲ್ಲಿನ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿನ ಬಾವಿಗಳು ಬತ್ತಿದ್ದು, ನಲ್ಲಿಗಳಲ್ಲಿಯೂ ನೀರು ಬರುತ್ತಿಲ್ಲ. ಸೈಕಲ್ ಹಾಗೂ ಬೈಕ್‌ಗಳ ಮೂಲಕ ದೂರದ ಊರಿನ ಖಾಸಗಿ ಬಾವಿಗಳಿಂದ ನೀರು ತರಬೇಕಾಗಿದೆ. ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿಂಗಳ ಹಿಂದೆ ಗ್ರಾಮದಲ್ಲಿದ್ದ ಬೋರ್‌ವೆಲ್‌ನಿಂದ ಎಲ್ಲರೂ ನೀರು ಪಡೆದುಕೊಳ್ಳುತ್ತಿದ್ದೆವು. ಆದರೆ ಅಧಿಕಾರಿಗಳು ಇದ್ದಕ್ಕಿದಂತೆ ಬೊರ್‌ವೆಲ್‌ಗೆ ಅಳವಡಿಸಿದ ಪಂಪ್ ಸರಿ ಇಲ್ಲ ಎಂದು ಅದನ್ನು ಕಿತ್ತು ರಿಪೇರಿ ಮಾಡಿಸುವುದಾಗಿ ಒಯ್ದವರೂ ಸರಿಯಾಗಿ ಜೋಡಿಸಿಲ್ಲ. ಇದರಿಂದ ನೀರಿನ ಸಮಸ್ಯೆ ತೀವ್ರಗೊಂಡಿದೆ ಎಂದು ವಿವರಿಸಿದರು. ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಸರಿಪಡಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದ್ದೇವೆ. ಆದರೆ ಆರಂಭದಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ನೀರು ಪೂರೈಕೆಯಾಗದ ಬಗ್ಗೆ ಅವರ ಗಮನಕ್ಕೆ ತರಲು ಹೋದರೆ ಈಗ ನಮ್ಮ ಪೋನ್ ಕೂಡ ರಿಸಿವ್ ಮಾಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪೂರೈಕೆ ಮಾಡುತ್ತಿರುವ ನೀರು ಸೇವಿಸಿ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದು, ಅವರು ಪೂರೈಕೆ ಮಾಡುವ ನೀರನ್ನು ಬಳಸಲು ಭಯವಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಅಧಿಕಾರಿಗಳು ನಿರ್ಲಕ್ಷವಹಿಸುತ್ತಿರುವುದು ಸರಿಯಲ್ಲ. ಕೂಡಲೇ ಶುದ್ಧ ನೀರನ್ನು ಪೂರೈಕೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಅನಿತಾ ಶಿರವಾಡಕರ್, ಮಂಜುಳಾ ಶಿರವಾಡಕರ್, ರೇಖಾ ಶಿರವಾಡಕರ್, ಶೋಭಾ, ಮಂಜುಶ್ರೀ ಸೇರಿದಂತೆ ಹಲವು ಮಹಿಳೆಯರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News