×
Ad

ತಂಬಾಕು ತ್ಯಜಿಸಿ ಆರೋಗ್ಯ ವೃದ್ಧಿಸಿ: ನ್ಯಾ.ಮಹಾಸ್ವಾಮೀಜಿ

Update: 2016-05-31 22:06 IST

ಮಡಿಕೇರಿ, ಮೇ 31: ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಸೇವನೆಯ ಹವ್ಯಾಸವನ್ನು ತ್ಯಜಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಆರ್‌ಕೆಜಿಎಂಎಂ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಜಿಲ್ಲಾ ಕಾರಾಗೃಹ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದ್ದರೂ ನಿಯಮ ಉಲ್ಲಂಘನೆಯಾಗುತ್ತಿದೆ. ತಂಬಾಕು ಸೇವಿಸುವುದರಿಂದ ಸುಮಾರು 64ಕ್ಕೂ ಹೆಚ್ಚು ಬಗೆಯ ಕಾಯಿಲೆಗಳು ಬರಲಿದೆ ಎಂದು ವೈದ್ಯರ ಸಮೀಕ್ಷೆಗಳಿಂದ ತಿಳಿದು ಬಂದಿದೆ. ಆದ್ದರಿಂದ ತಂಬಾಕು ಸೇವನೆಯಿಂದ ದೂರವಿರುವುದು ಸೂಕ್ತವೆಂದು ಜಿಲ್ಲಾ ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್‌ಪ್ರಭು ಮಾತನಾಡಿ, ಆರೋಗ್ಯವೇ ಭಾಗ್ಯ ಎನ್ನುವಂತೆ, ಉತ್ತಮ ಆರೋಗ್ಯ ಹೊಂದಿದ್ದಲ್ಲಿ, ಒಳ್ಳೆಯ ಬದುಕು ನಡೆಸಬಹುದು. ಆದ್ದರಿಂದ ಧೂಮಪಾನದಿಂದ ದೂರವಿರಬೇಕು ಎಂದು ಹೇಳಿದರು. ಧೂಮಪಾನ ಅಥವಾ ತಂಬಾಕು ಪದಾರ್ಥಗಳ ಸೇವನೆಯಿಂದ ಒಬ್ಬ ವ್ಯಕ್ತಿಯ ಆರೋಗ್ಯಕ್ಕೆ ಹಾನಿಯಾಗುವುದರ ಜೊತೆಗೆ ಹಣ ವ್ಯಯವಾಗುತ್ತದೆ. ಇದರಿಂದ ಆರ್ಥಿಕವಾಗಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಧೂಮಪಾನ, ತಂಬಾಕು, ಮದ್ಯಪಾನದಂತಹ ಚಟಕ್ಕೆ ಒಳಗಾಗದೆ ಆರೋಗ್ಯಯುತ ಜೀವನ ಪಡೆಯಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಮೋಹನ್ ಪ್ರಭು ಸಲಹೆ ನೀಡಿದರು.

 ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್ ಮಾತನಾಡಿ, ಸರಕಾರ ತಂಬಾಕು ಸೇವನೆ ವಿರುದ್ಧ ಹಲವಾರು ಕಾನೂನು ಮಾಡಿದೆ. ದೇಶದ 15 ರಾಜ್ಯಗಳಲ್ಲಿ ತಂಬಾಕು ಸೇವನೆಗೆ ನಿಷೇಧ ಮಾಡಿದ್ದಾರೆ. ತಂಬಾಕು ಸೇವನೆಯಿಂದ ಶ್ವಾಸಕೋಶ, ಹೃದಯ ಸಂಬಂಧಿತ ಕಾಯಿಲೆಗಳಿಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವಕೀಲೆ ಕೆ.ಎಂ.ಮೀನಾ ಕುಮಾರಿ, ಜಿಲ್ಲಾ ಕಾರಾಗೃಹದ ಅಧೀಕ್ಷಕ ಪಿ.ಮಹಾದೇವ ನಾಯಕ್, ಜಿಲ್ಲಾ ಕಾರಾಗೃಹದ ಸಿಬ್ಬಂದಿ ರಮೇಶ್ ಪೂಜಾರಿ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News