‘ದೇ.ಜವರೇಗೌಡ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅಪಾರ’
ಚಿಕ್ಕಮಗಳೂರು, ಮೇ 31: ದೇ.ಜವರೇಗೌಡರವರು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದದ್ದು, ಅವರ ಮರಣದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಜಿ.ಬಿ.ಪವನ್ ತಿಳಿಸಿದ್ದಾರೆ.
ಅವರು ಮಂಗಳವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದೇ. ಜವರೇಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ದೇ.ಜವರೇಗೌಡರವರ ವ್ಯಕ್ತಿತ್ವ ಮತ್ತು ಅವರ ಆದರ್ಶದ ಬದುಕನ್ನು ನಾವುಗಳು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು. ದೇ.ಜವರೇಗೌಡರು ಸಾಹಿತಿಯಾಗಿದ್ದು, ಸಮಾಜ ಪರ ಹೋರಾಟಗಾರರಾಗಿ ನಿಷ್ಠುರವಾದಿಯಾಗಿ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ಇತ್ತೀಚೆಗೆ ರಾಜ್ಯದಲ್ಲಿ ವೌಢ್ಯ ನಿಷೇಧ ಕಾಯ್ದೆ ಅನುಷ್ಠಾನದ ಚರ್ಚೆಯಲ್ಲಿ ಈ ಇಳಿವಯಸ್ಸಿನಲ್ಲೂ ತೋರಿದ ಆಸಕ್ತಿ ಎಲ್ಲ ವರ್ಗದ ಜನರಿಗೆ ಮಾರ್ಗದರ್ಶನವಾಗಿದೆ ಎಂದರು.
ರಾಷ್ಟ್ರಕವಿ ಕುವೆಂಪುರವರ ವಿಶ್ವ ಮಾನವ ಸಂದೇಶದ ಬಗ್ಗೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದ ಅವರು, ಅಂದರಂತೆಯೇ ನಡೆದುಕೊಂಡು ಜನರ ಹೃದಯ ಮತ್ತು ಮನಸ್ಸಿನಲ್ಲಿ ಅಮರಣೀಯರಾಗಿದ್ದಾರೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಮುಹಮ್ಮದ್ ಮಾತನಾಡಿ, ದೇ. ಜವರೇಗೌಡರ ಜಾತ್ಯತೀತ ನಿಲುವು ಭಾರತದ ಸಂವಿಧಾನ ಮತ್ತು ದೇಶದ ಬೆಳವಣಿಗೆಗೆ ಬುನಾದಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಎನ್.ಎಸ್.ಶಿವಸ್ವಾಮಿ, ವಿಶ್ವಮೂರ್ತಿ, ಮುಖಂಡರಾದ ರಾಧಾಕೃಷ್ಣ ಮಾತನಾಡಿದರು.
ಸಭೆಯಲ್ಲಿ ಗ್ರಾಮೀಣ ಪೊಲೀಸ್ ವೃತ್ತ ನಿರೀಕ್ಷಕ ವಿನೋದ್ ಭಟ್, ಮುಖಂಡರಾದ ಅಮ್ಜ್‌ದ್, ಸಿ.ಇ.ಚೇತನ್, ಕಸಾಪ ಅಧ್ಯಕ್ಷ ಪುಟ್ಟಸ್ವಾಮಿ, ಕೋಶಾಧ್ಯಕ್ಷ ಸೀತಾರಾಮ್, ಸಂತೋಷ್, ಪ್ರಕಾಶ್, ಲಕ್ಷ್ಮೀಕಾಂತ್, ನಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.