ಅಂಗವಿಕಲರ ಶಾಲೆಗಳ ಬೇಡಿಕೆ ಈಡೇರಿಕೆಗೆ ಒತ್ತಾಯ: ಸಚಿವೆ ಉಮಾಶ್ರೀಗೆ ಮನವಿ
ಚಿಕ್ಕಮಗಳೂರು, ಮೇ 31: ಅಂಗವಿಕಲರ ಶಾಲೆಗಳ ಕೆಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಆಶಾಕಿರಣ ಅಂಧ ಮಕ್ಕಳ ಶಾಲೆಯ ಮುಖ್ಯಸ್ಥ ಡಾ.ಜೆ.ಪಿ.ಕೃಷ್ಣೇಗೌಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀಗೆ ಮನವಿ ಸಲ್ಲಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಅಂಗವಿಕಲರಿಗಾಗಿ ದುಡಿಯುತ್ತಿರುವ ಸುಮಾರು 150ಸ್ವಯಂ ಸೇವಾ ಸಂಸ್ಥೆಗಳಿದ್ದು, ಅವುಗಳಲ್ಲಿ 35ಸಂಸ್ಥೆಗಳು ರಾಜ್ಯ ಅನುದಾನಕ್ಕೆ ಒಳಪಟ್ಟಿವೆ. ಈ ಸಂಸ್ಥೆಗಳಲ್ಲಿ ಸುಮಾರು 2,500ಉದ್ಯೋಗಿಗಳು ಅಂಗವಿಕಲರ ಏಳಿಗೆಗಾಗಿ ಅಹರ್ನಿಷಿ ದುಡಿಯುತ್ತಿದ್ದಾರೆ. ಇವರಲ್ಲಿ ಬಹುತೇಕ ಅಂಗವಿಕಲ ವರ್ಗಕ್ಕೆ ಸೇರಿದವರಾಗಿದ್ದಾರೆ. ಈ ಉದ್ಯೋಗಿಗಳಿಗೆ ಬೇರೆ ಯಾವುದೇ ಆದಾಯದ ಮೂಲಗಳಿಲ್ಲ. ಸಂಸ್ಥೆಗಳು ಫಲಾನುಭವಿಗಳಿಂದ ಯಾವುದೇ ಶುಲ್ಕ, ದೇಣಿಗೆಯನ್ನು ಪಡೆಯದೆ ಉಚಿತವಾಗಿ ಶಿಕ್ಷಣ ಮತ್ತು ತರಬೇತಿ ನೀಡುತ್ತಿವೆ ಎಂದಿದ್ದಾರೆ.
ಅಂಗವಿಕಲರ ಶಾಲೆಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಜಾರಿಗೊಳಿಸಬೇಕು. 2006 ಎ 1ರ ನಂತರ ಸೇವೆಗೆ ಸೇರಿದ ಎಲ್ಲ ಉದ್ಯೋಗಿಗಳಿಗೆ ನೂತನ ಪಿಂಚಣಿ ಅಳವಡಿಸಬೇಕು ಹಾಗೂ ಉದ್ಯೋಗಿಗಳಿಗೆ ಎಚ್‌ಆರ್‌ಎಂಎಸ್ ಮೂಲಕ ವೇತನ ಸೆಳೆಯಲು ಅವಕಾಶ ನೀಡಬೇಕು. 2007ರಿಂದ ಈಚೆಗೆ ಅನುದಾನ ಪಡೆಯುತ್ತಿರುವ ಸಂಸ್ಥೆಗಳಿಗೆ ಜಾರಿಗೊಂಡಿರುವ ಶಿಶು ಕೇಂದ್ರಿತ ಅನುದಾನಕ್ಕೆ ಬದಲಾಗಿ 1982ರ ಅನುದಾನ ಸಂಹಿತೆಯ ಪ್ರಕಾರ ಅಂಗವಿಕಲರ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.
ಅಂಗವಿಕಲರ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಬೇಕು. ಅಂಗವಿಕಲರ ವಸತಿ ಶಾಲೆಗಳ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯನ್ನು ವಿಸ್ತರಿಸಬೇಕು. ಅಂಧಮಕ್ಕಳ ಪ್ರೌಢ ಶಾಲೆಗಳಿಗೆ ವೃತ್ತಿ ಶಿಕ್ಷಕ, ಸಂಗೀತ ಶಿಕ್ಷಕ, ದೈಹಿಕ ಶಿಕ್ಷಕ, ಕಂಪ್ಯೂಟರ್ ಶಿಕ್ಷಕ, ಚಲನವಲನ ತರಬೇತಿ ಶಿಕ್ಷಕ, ಭಾಷಾವಾರು ಶಿಕ್ಷಕರು, ವಾಚ್‌ಮನ್ ಹಾಗೂ ಸ್ವೀಪರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಂಗವಿಕಲರ ಶಾಲೆಗಳಲ್ಲಿನ ಫಲಾನುಭವಿಗಳ ನಿರ್ವಹಣಾ ವೆಚ್ಚ 1,000 ರೂ. ಗಳಿಂದ 1,500 ರೂ. ಗೆ ಹೆಚ್ಚಿಸಬೇಕು. ಪ್ರಸ್ತುತ ಅಂಗವಿಕಲರ ಸಂಸ್ಥೆಗಳಿಗೆ ವಾರ್ಷಿಕ 7,050 ರೂ. ಸಾದಿಲ್‌ವಾರು ವೆಚ್ಚ ನೀಡುತ್ತಿರುವುದನ್ನು ಕನಿಷ್ಠ 1 ಲಕ್ಷ ರೂ. ಗೆ ಹೆಚ್ಚಿಸಬೇಕು ಎಂದಿದ್ದಾರೆ.
ಸರಕಾರದ ವ್ಯಾಪ್ತಿಯಲ್ಲಿ ಏಕೈಕ ಬ್ರೈಲ್ ಮುದ್ರಣಾಲಯ ಮೈಸೂರಿನಲ್ಲಿದ್ದು, ಸಕಾಲದಲ್ಲಿ ಪುಸ್ತಕಗಳು ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಉತ್ತರ ಕರ್ನಾಟಕದಲ್ಲಿಯು ಬ್ರೈಲ್ ಮುದ್ರಣಾಲಯ ಘಟಕ ತೆರೆದು ಅನುಕೂಲ ಮಾಡಿಕೊಡಬೇಕು. ಅಂಗವಿಕಲರಿಗೆ ನೀಡುತ್ತಿರುವ ಮಾಸಾಶನದ ತಾರತಮ್ಯವನ್ನು ಹೋಗಲಾಡಿಸಿ ಎಲ್ಲ ಅಂಗವಿಕಲರಿಗೂ ತಿಂಗಳಿಗೆ ಕನಿಷ್ಠ 1,500 ರೂ. ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.