ತಂಬಾಕು ಉತ್ಪನ್ನಗಳ ಬಳಕೆ ಆರೋಗ್ಯಕ್ಕೆ ಮಾರಕ: ನ್ಯಾಯಾಧೀಶ ಎಂ.ರಾಜು
ಚಿಕ್ಕಮಗಳೂರು, ಮೇ 31: ತಂಬಾಕು ಉತ್ಪನ್ನಗಳನ್ನು ಬಳಸುವವರು ತಮ್ಮ ಆರೋಗ್ಯವನ್ನು ಹಾನಿಗೊಳಪಡಿಸಿಕೊಳ್ಳುವ ಜೊತೆಗೆ ಸುತ್ತಮುತ್ತಲ ಇತರರ ಆರೋಗ್ಯಕ್ಕೂ ಮಾರಕವಾಗುತ್ತಿದ್ದಾರೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ರಾಜು ತಿಳಿಸಿದರು.
ಅವರು ಮಂಗಳವಾರ ನಗರದ ಜಿಲ್ಲಾಸ್ಪತ್ರೆ ಕಚೇರಿ ಆವರಣದ ರಾಬರ್ಟ್ ಕಾಕ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ, ವಾರ್ತಾ ಇಲಾಖೆ ಹಾಗೂ ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ನಾಗರಿಕರು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ದುಶ್ಚಟಗಳಿಂದ ದೂರ ಉಳಿಯುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಜನತೆಯನ್ನು ಎಚ್ಚರಿಸುವ ದೃಷ್ಟಿಯಿಂದ ವಿಶ್ವಸಂಸ್ಥೆ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಅಚರಿಸುತ್ತಾ ಬರುತ್ತಿದೆ ಎಂದರು. ಮನೋರೋಗ ತಜ್ಞ ಡಾ.ಎಂ.ಚಂದ್ರಶೇಖರ್ ತಂಬಾಕು ಉತ್ಪನಗಳ ಬಳಕೆಯ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಹಳೆ ತಾಲೂಕು ಕಚೇರಿ ಆವರಣದಿಂದ ಆರಂಭಗೊಂಡ ಜನ ಜಾಗೃತಿ ಜಾಥಾಗೆ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸರ್ಜನ್ ಡಾ.ಕುಮಾರ್ ವಹಿಸಿದರು. ಡಿಎಚ್‌ಒ ಡಾ.ಮಲ್ಲಿಕಾರ್ಜುನಪ್ಪ, ವಕೀಲರ ಸಂಘದ ಅಧ್ಯಕ್ಷ ಎಚ್.ಎಚ್.ಕೃಷ್ಣಮೂರ್ತಿ, ನೈಟಿಂಗೇಲ್ ಸ್ಕೂಲ್ ಆಫ್ ನರ್ಸಿಂಗ್, ಆಶ್ರಯ ನರ್ಸಿಂಗ್ ಕಾಲೇಜ್, ಸಹ್ಯಾದ್ರಿ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
ಪೂಜಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ.ಎಸ್.ಕೆ.ಪ್ರಭು ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ ನಿರೂಪಿಸಿದರು.