ಪೊಲೀಸ್ದ ಕಾಯ್ದೆ ವಿರುದ್ಧ ನಡೆದರೆ ಕೆಲಸದಿಂದ ವಜಾ ಎಸಿ್ಪ ಡಾ. ಭೀಮಾಶಂಕರ್ ಎಚ್ಚರಿಕೆ
ದಾವಣಗೆರೆ, ಮೇ 31: ಪೊಲೀಸ್ ಕೆಲಸ ಇಷ್ಟ ಇಲ್ಲ ದವರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಆದರೆ, ಇಲಾಖೆಯಲ್ಲಿದ್ದುಕೊಂಡು ಪೊಲೀಸ್ ಕಾಯ್ದೆಗೆ ವಿರುದ್ಧವಾಗಿ ಪೊಲೀಸ್ ಸಿಬ್ಬಂದಿ ಜೂ.4ರ ಉದ್ದೇಶಿತ ಪ್ರತಿಭಟನೆಯಲ್ಲಿ ಭಾಗವಹಿಸಿದರೆ, ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಎಚ್ಚರಿಸಿದ್ದಾರೆ.
ನಗರದ ಜಿಲ್ಲಾ ಶಸ್ತ್ರ ಮೀಸಲು ಪಡೆಯ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ವರೆಗೂ ಸಾಮೂಹಿಕ ರಜೆ ಕೋರಿ 123 ಅರ್ಜಿಗಳು ಬಂದಿವೆ. ಸಾಮೂಹಿಕ ರಜೆಗಾಗಿ ಅರ್ಜಿ ಸಲ್ಲಿಸಿರುವವರ ಜೊತೆ ಚರ್ಚಿಸಿ, ಮನ ಪರಿವರ್ತನೆ ಮಾಡಲಾಗಿದ್ದು, ಇಂದು ಸಂಜೆಯ ವೇಳೆಗೆ ಸುಮಾರು ಶೇ.50 ರಷ್ಟು ಅರ್ಜಿಗಳನ್ನು ವಾಪಾಸ್ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಪೊಲೀಸ್ ಕಾಯ್ದೆಗೆ ವಿರುದ್ಧವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದರೆ, ಅಂತಹಾ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸುವ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೊಲೀಸ್ ಕಾಯ್ದೆಯ ಬಗ್ಗೆ ಕೆಲಸಕ್ಕೆ ಸೇರುವ ಮುನ್ನವೇ ತಿಳಿಸಲಾಗುತ್ತದೆ. ಆದರೆ, ಈಗ ಇಲಾಖೆಯಲ್ಲಿದ್ದುಕೊಂಡು ಕಾಯ್ದೆಗೆ ವಿರುದ್ಧವಾಗಿ ನಡೆದುಕೊಂಡರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದ ಅವರು, ಒಂದು ವೇಳೆ ಈ ಕಡಿಮೆ ವೇತನದ ಕೆಲಸ ಬೇಡವಾದವರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಪೊಲೀಸರಿಗೆ ಸ್ಪಷ್ಟ ಸೂಚನೆ ನೀಡಿದರು. ಇಲಾಖೆಯ ನಿವೃತ್ತರು ಮತ್ತು ಕೆಲ ಪಟ್ಟಭದ್ರಹಿತಾಸಕ್ತಿಗಳು ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ತಪ್ಪುಮಾಹಿತಿ ನೀಡಿ, ಪ್ರತಿಭಟನೆ ನಡೆಸುವಂತೆ ಪ್ರಚೋದನೆ ನೀಡುತ್ತಿದ್ದಾರೆ. ಗೃಹ ಇಲಾಖೆ ಪ್ರತಿವರ್ಷ ಸಿಬ್ಬಂದಿಯ ಸಮವಸ್ತ್ರಕ್ಕಾಗಿ 35 ಕೋಟಿ ರೂ. ವ್ಯಯಿಸುತ್ತಿದೆ. ಪೊಲೀಸ್ ಸಿಬ್ಬಂದಿಗೆ ಸರಕಾರ ಎಲ್ಲಾ ರೀತಿಯಿಂದಲೂ ಸ್ಪಂದಿಸುತ್ತಿದೆ. ಆದರೆ, ಸಿಬ್ಬಂದಿ ಮೊದಲು ಶಾಂತಿಯುತವಾಗಿ ಸಮಸ್ಯೆ ಹೇಳಿಕೊಳ್ಳುವುದನ್ನು ಬಿಟ್ಟು ಪ್ರತಿಭಟನೆಯ ಮಾರ್ಗ ಹಿಡಿದಿರುವುದು ಸರಿಯಲ್ಲ ಎಂದರು.
ನಮ್ಮ ರಾಜ್ಯದಲ್ಲಿರುವಷ್ಟು ಸೌಲಭ್ಯ ಯಾವ ರಾಜ್ಯದ ಪೊಲೀಸ್ ಸಿಬ್ಬಂದಿಗೂ ಇಲ್ಲ. ಪೊಲೀಸ್ ಸಿಬ್ಬಂದಿಯ ವೇತನದಲ್ಲಿ ಆರೋಗ್ಯ ಭಾಗ್ಯ ಯೋಜನೆಗೆ ವಾರ್ಷಿಕ 1200 ರೂ. ನೀಡಲಾಗುತ್ತಿದೆ. ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರ ಆಸ್ಪತ್ರೆ ವೆಚ್ಚ ಸುಮಾರು ಲಕ್ಷ ರೂ. ವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಇನ್ನುಳಿದ ಹಣ ಎಲ್ಲಿಂದ ಬಂತು ಎಂದು ಸಿಬ್ಬಂದಿಯನ್ನು ಖಾರವಾಗಿ ಪ್ರಶ್ನಿಸಿದರು.
ಆರೋಗ್ಯ ಭಾಗ್ಯ, ಪಡಿತರ ವಿತರಣೆ, ಕ್ಯಾಂಟಿನ್ ಸೌಲಭ್ಯ ಕರ್ನಾಟಕ ಪೊಲೀಸ್ ಸಿಬ್ಬಂದಿಯನ್ನು ಹೊರತು ಪಡಿಸಿದರೆ ಬೇರೆಯಾವ ರಾಜ್ಯದ ಪೊಲೀಸ್ ಸಿಬ್ಬಂದಿಗೂ ಇಲ್ಲ. ಅಲ್ಲದೆ, ಕರ್ನಾಟಕದ ಇತರೆ ಇಲಾಖೆಗಳ ನೌಕರರಿಗೂ ಇಲ್ಲ. ರಾಜ್ಯದಲ್ಲಿ 5 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ನಡೆಯಲಿದ್ದು, ಇನ್ನು 2017ರ ವರೆಗೆ ಕಾಯಲೇ ಬೇಕು ಎಂದರು.
ಪೊಲೀಸ್ ಕ್ವಾಟ್ರಸ್‌ನಲ್ಲಿದ್ದ ಹಳೇ ಮನೆಗಳನ್ನು ತೆರವು ಗೊಳಿಸಲಾಗಿದೆ. ಈಗ ಹೊಸ ಮನೆಗಳನ್ನು ನಿರ್ಮಿಸಲು ಇಲಾಖೆ ಮುಂದಾಗಿದೆ. ಈಗ 2 ಬೆಡ್ ರೂಂ ಇರುವ ಸುಸಜ್ಜಿತ ಮನೆಗಳನ್ನು ನಿರ್ಮಿಸಿ, ಸಿಬ್ಬಂದಿಗಳಿಗೆ ಇನ್ನೂ ಕೆಲವೇ ದಿನಗಳಲ್ಲಿ ವಿತರಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೆ, ವಾರದ ರಜೆ, ಸಿಬ್ಬಂದಿಯ ಸ್ವಂತ ಮದುವೆಗೆ 25 ದಿನಗಳ ವರೆಗೆ ರಜೆ, ಸಹೋದರ, ಸಹೋದರಿ ಸೇರಿದಂತೆ ಇತರ ಸಿಬ್ಬಂದಿಯ ಮದುವೆಗೆ 7 ದಿನ ರಜೆ, ಸಿಬ್ಬಂದಿಯ ಜನ್ಮದಿನ, ಮಕ್ಕಳ ಹಾಗೂ ಪತ್ನಿಯ ಜನ್ಮದಿನದಂದು ವಾರದ ರಜೆ ಇಲ್ಲವೆ, ಆಕಸ್ಮಿಕ ರಜೆ ನೀಡಲಾಗುತ್ತಿದೆ. ಮಹಿಳಾ ಸಿಬ್ಬಂದಿಗೆ 6 ತಿಂಗಳು ಹೆರಿಗೆ ರಜೆ, ಪುರುಷ ಸಿಬ್ಬಂದಿಗೆ ಪತ್ನಿಯ ಹೆರಿಗೆಯಾದ ದಿನದಿಂದ 15 ದಿನಗಳ ವರಗೆ ರಜೆ ನೀಡಲಾಗುತ್ತಿದೆ. ಈ ರೀತಿಯ ಎಲ್ಲಾ ಸೌಲಭ್ಯಗಳನ್ನು ಇಲಾಖೆ ಪೊಲೀಸ್ ಸಿಬ್ಬಂದಿಗೆ ಕಲ್ಪಿಸಲು ಸಿದ್ಧವಿದೆ. ಆದರೆ, ಸಿಬ್ಬಂದಿ ಪ್ರತಿಭಟನೆಯ ಬದಲು, ಸಮಸ್ಯೆಗಳನ್ನು ಮೇಲಧಿಕಾರಿಗಳಿಗೆ ತಿಳಿಸಿ ಶಾಂತಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.