×
Ad

‘ಮಹಿಳೆಯರ ಧೂಮಪಾನ ಸೇವನೆ ಸಾಮಾಜಿಕ ದುರಂತ’

Update: 2016-05-31 22:19 IST

ಶಿವಮೊಗ್ಗ, ಮೇ 31: ಮಹಿಳೆಯರು ಧೂಮಪಾನ ಸೇವನೆಗೆ ಮುಂದಾಗಿರುವುದು ಸಾಮಾಜಿಕ ದುರಂತವೇ ಸರಿ ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ವಿಶ್ವ ತಂಬಾಕು ನಿಷೇಧ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಾದ್ಯಂತ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಪ್ರತಿದಿನ 150ಕ್ಕೂ ಹೆಚ್ಚಿನ ಜನ ಮರಣ ಹೊಂದುತ್ತಿದ್ದಾರೆ. ಸರಕಾರ ಸಾರ್ವಜನಿಕ ಹಾಗೂ ಜನನಿಬಿಡ ಸ್ಥಳಗಳಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿಷೇಧಿಸಿದೆ. ಅಲ್ಲದೆ ಅದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಸಮಿತಿಯನ್ನು ರಚಿಸಿದೆ. ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮಕ್ಕೂ ಆದೇಶಿಸಿದೆ. ಆದರೂ ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆ ಎಗ್ಗಿಲ್ಲದೆ ನಡೆಯುತ್ತಿವೆ ಎಂದರು. ತಂಬಾಕು ಸೇವನೆ ಸಾರ್ವಜನಿಕ ಜೀವನಕ್ಕೆ ಒಂದು ಗಂಭೀರ ಸವಾಲಾಗಿ ಪರಿಣಮಿಸಿದ್ದು, ಅಪಾರ ಪ್ರಮಾಣದಲ್ಲಿ ರೋಗ ರುಜಿನ ಹಾಗೂ ಸಾವು ನೋವುಗಳಿಗೆ ಕಾರಣವಾಗಿದೆ. ಇದರ ಬಳಕೆಯಿಂದ ವ್ಯಕ್ತಿ ತಾನು ಮಾತ್ರವಲ್ಲದೆ ಇತರರನ್ನೂ ಪರೋಕ್ಷವಾಗಿ ರೋಗಪೀಡಿತರಾನ್ನಾಗಿಸುತ್ತಿದ್ದಾನೆ. ತಂಬಾಕು ಸೇವನೆ ದೇಹದ ಪ್ರತಿ ಅಂಗಕ್ಕೂ ಹಾನಿಯನ್ನುಂಟು ಮಾಡುತ್ತದೆ ಎಂದರು. ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಶ್ವಾಸಕೋಶಗಳ ಕ್ಯಾನ್ಸರ್, ಗಂಟು ಗೂಡು ಕ್ಯಾನ್ಸರ್ ಅನ್ನನಾಳದ ಕ್ಯಾನ್ಸರ್ ಉಂಟು ಮಾಡುತ್ತದೆ. ಹೃದಯಾಘಾತ, ಶ್ವಾಸಕೋಶಗಳ ಒಳಪೊರೆಯಲ್ಲಿ ದೀರ್ಘಕಾಲೀನ ಉರಿಯೂತ, ಬಂಜೆತನಕ್ಕೆ ಕಾರಣವಾಗಲಿದೆ. ಸ್ವಯಂ ಮಾನಸಿಕ ನಿಯಂತ್ರಣದಿಂದ ತಂಬಾಕು ಸೇವನೆಯನ್ನು ಬಿಟ್ಟುಬಿಡಬಹುದಾಗಿದೆ. ಸ್ವಯಂ ನಿರ್ಣಯವೊಂದೆ ಚಟದಿಂದ ಹೊರಬರಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ್ ಸಿ. ಬಾದಾಮಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಲ್ನಾಡ್ ಆಸ್ಪತ್ರೆಯ ವೈದ್ಯ ಡಾ. ಮಲ್ಲೇಶ ಹುಲಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಡಾ.ನರೇಂದ್ರ ಭಟ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News