×
Ad

‘ಧರಣಿಯಲ್ಲಿ ಭಾಗಿಯಾಗುವ ಪೊಲೀಸರ ವಿರುದ್ಧ ಕಠಿಣ ಕ್ರಮ’

Update: 2016-05-31 22:23 IST

ಶಿವಮೊಗ್ಗ, ಮೇ 31: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂನ್. 4ರಂದು ರಾಜ್ಯ ಪೊಲೀಸರು ಸಾಮೂಹಿಕವಾಗಿ ರಜೆ ಹಾಕುವ ಮೂಲಕ ಕರ್ತವ್ಯ ಬಹಿಷ್ಕರಿಸಿ ನಡೆಸಲು ಉದ್ದೇಶಿಸಿರುವ ಪರೋಕ್ಷ ಧರಣಿಯು ರಾಜ್ಯ ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ರಾಜ್ಯ ಸರಕಾರವು ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ಪೊಲೀಸರ ಮೇಲೆ ಒತ್ತಡ ಹಾಕಿಸುವ ಕೆಲಸ ಮಾಡುತ್ತಿದೆ. ಸಾಮೂಹಿಕ ರಜೆ ಹಾಕದಂತೆ ಹಾಗೂ ಧರಣಿಯಲ್ಲಿ ಭಾಗಿಯಾಗದಂತೆ ಪೊಲೀಸರಿಗೆ ಎಚ್ಚರಿಕೆ ನೀಡುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ. ಇದಕ್ಕೆ ರಾಜ್ಯ ಪೊಲೀಸ್ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಪೊಲೀಸರಿಗೆ ಮುಷ್ಕರ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಮುಷ್ಕರ, ಧರಣಿಯಲ್ಲಿ ಭಾಗಿಯಾಗುವ ಸಿಬ್ಬಂದಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ತಿಳಿದುಬಂದಿದೆ. ವಜಾ ಎಚ್ಚರಿಕೆ:

ರಾಜ್ಯ ಪೊಲೀಸ್ ಇಲಾಖೆಯು ಹೊರಡಿಸಿರುವ ಸುತ್ತೋಲೆಯನ್ನು ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರವಾನಿಸಿದೆ. ಇದರಲ್ಲಿ ಪೊಲೀಸ್ ಫೋರ್ಸ್ ಕಾಯ್ದೆ, ಸುಪ್ರೀಂಕೋರ್ಟ್ ಆದೇಶ ಹಾಗೂ ಸಂವಿಧಾನದಲ್ಲಿ ಪೊಲೀಸರ ಕರ್ತವ್ಯ ನಿರ್ವಹಣೆ ಸಂಬಂಧಿಸಿದಂತೆ ಹೇಳಲಾಗಿರುವ ಸಂಕ್ಷಿಪ್ತ ಮಾಹಿತಿ ನೀಡಿದೆ. ಪೊಲೀಸರಿಗೆ ವಾಕ್ ಸ್ವಾತಂತ್ರ, ಪ್ರತಿಭಟನೆ, ಸಂಘಟನೆಗಳಲ್ಲಿ ಭಾಗಿಯಾಗುವುದರ ಮೇಲೆ ವಿಧಿಸಲಾಗಿರುವ ನಿರ್ಬಂಧದ ಬಗ್ಗೆ ತಿಳಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ಕಾನೂನು ರೀತಿಯ ಕೈಗೊಳ್ಳಬಹುದಾದ ಶಿಸ್ತುಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. ಪ್ರಸ್ತುತ ಹೊರಡಿಸಲಾಗಿರುವ ಸುತ್ತೋಲೆಗೆ ಪೊಲೀಸರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ನಾನಾ ರೀತಿಯ ಕಸರತ್ತು ನಡೆಸಲಾಗುತ್ತಿದೆ. ಸಾಮೂಹಿಕ ರಜೆ ಹಾಕದಂತೆ ಒತ್ತಡ ಹೇರಲಾಗುತ್ತಿದೆ. ನಿಯಮ ಮೀರುವವರ ವಿರುದ್ದ ಕೆಲಸದಿಂದ ಅಮಾನತುಗೊಳಿಸುವ ಹಾಗೂ ವಜಾಗೊಳಿಸುವ ಎಚ್ಚರಿಕೆ ಕೊಡಲಾಗುತ್ತಿದೆ. ಆದರೆ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಪೊಲೀಸ್ ಸಿಬ್ಬಂದಿಯೋರ್ವರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಶಿವಮೊಗ್ಗದಲ್ಲಿ ಸಭೆ:

ಈ ನಡುವೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವ ಸೋಮವಾರ ರಾತ್ರಿ ಶಿವಮೊಗ್ಗ ನಗರದ ಡಿ.ಎ.ಆರ್. ಸಭಾಂಗಣದಲ್ಲಿ ಪೊಲೀಸರ ಸಭೆಯೊಂದನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಭೆಯಲ್ಲಿ ಜೂನ್ 4ರಂದು ಸಾಮೂಹಿಕ ರಜೆ ಹಾಕುವುದು, ಪ್ರತಿಭಟನೆ, ಮುಷ್ಕರದಲ್ಲಿ ಭಾಗಿಯಾಗದಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಮುಷ್ಕರ ನಡೆಸಲು ಕಾನೂನಿನಲ್ಲಿ ಪೊಲೀಸರಿಗೆ ಅವಕಾಶವಿಲ್ಲ ಎಂಬುವುದನ್ನು ಮನದಟ್ಟು ಮಾಡಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಮುಷ್ಕರದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನು ರೀತಿಯ ಶಿಸ್ತು ಕ್ರಮ ಜರಗಿಸುವ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಪೊಲೀಸ್ ಕುಟುಂಬ ಸದಸ್ಯರು ತಾವು ಅನುಭವಿಸುತ್ತಿರುವ ಸಮಸ್ಯೆಯ ಬಗ್ಗೆ ಎಸ್ಪಿ ಬಳಿ ಅಹವಾಲು ತೋಡಿಕೊಂಡಿದ್ದಾರೆ. ಪೊಲೀಸ್ ಕಾಲನಿಗಳಿಗೆ ತಾವೇ ಖುದ್ದು ಭೇಟಿಯಿತ್ತು ತಮ್ಮ ಮಟ್ಟದಲ್ಲಾಗುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆಯಿತ್ತಿದ್ದಾರೆ ಎಂದು ತಿಳಿದುಬಂದಿದೆ.

ಜೂ.4ರಂದು ಕೇಂದ್ರ ಸ್ಥಾನದಲ್ಲಿರಲು ಅಧಿಕಾರಿಗಳಿಗೆ ಸೂಚನೆ

ಜೂ. 4ರಂದು ಪೊಲೀಸರು ಕರ್ತವ್ಯಕ್ಕೆ ಸಾಮೂಹಿಕ ರಜೆ ಅಥವಾ ಗೈರು ಹಾಜರಾಗಿ ಪರೋಕ್ಷ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದು ಹಾಗೂ ಪೊಲೀಸ್‌ರ ಪ್ರತಿಭಟನೆ ಬೆಂಬಲಿಸಿ ವಿವಿಧ ಸಂಘಸಂಸ್ಥೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಅಂದು ಹಿರಿಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸ್ಥಿತಿಗತಿಯ ಪರಿಶೀಲನೆ ನಡೆಸುವಂತೆ ರಾಜ್ಯ ಸರಕಾರ ಸೂಚನೆ ನೀಡಿದೆ. ಈ ಕುರಿತಂತೆ ಎಲ್ಲ ಜಿಲ್ಲಾಡಳಿತಗಳಿಗೆ ಮಾಹಿತಿ ರವಾನಿಸಲಾಗಿದ್ದು, ಜೂ. 4ರಂದು ಉಪವಿಭಾಗಾಧಿಕಾರಿಗಳು ಹಾಗೂ ತಹ ಶೀಲ್ದಾರ್‌ರು ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಡಳಿತದ ಉನ್ನತ ಮೂಲಗಳು ಮಾಹಿತಿ ನೀಡಿವೆ. ಗೊಂದಲದಲ್ಲಿ ಶಿವಮೊಗ್ಗ ನಗರದ ಪೊಲೀಸರು

ಈಗಾಗಲೇ ಜಿಲ್ಲೆಯ ಹಲವೆಡೆ ಪೊಲೀಸರು ತಮ್ಮ ಮೇಲಾಧಿಕಾರಿಗಳಿಗೆ ಜೂ. 4 ರಂದು ಸಾಮೂಹಿಕ ರಜೆ ಮೇಲೆ ತೆರಳುವ ಮನವಿ ಸಲ್ಲಿಸಿದ್ದಾರೆ. ಈ ನಡುವೆ ಹಿರಿಯ ಪೊಲೀಸ್ ಅಧಿಕಾರಿಗಳು ಸಾಮೂಹಿಕ ರಜೆ ಹಾಕದಂತೆ ಹಾಗೂ ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಇದು ಶಿವಮೊಗ್ಗ ನಗರದ ಪೊಲೀಸರನ್ನು ಗೊಂದಲಕ್ಕೀಡು ಮಾಡಿದೆ. ಶಿವಮೊಗ್ಗ ನಗರದಲ್ಲಿ ಒಂದೆರೆಡು ಪೊಲೀಸ್ ಠಾಣೆಗಳ ಪೊಲೀಸರು ಸಾಮೂಹಿಕ ರಜೆ ಕೋರಿ ಮನವಿ ಸಲ್ಲಿಸಿರುವ ಮಾಹಿತಿಗಳಿವೆ. ಉಳಿದಂತೆ ಇತರೆ ಠಾಣೆಗಳ ಪೊಲೀಸರು, ಡಿಎಆರ್, ಕೆಎಸ್‌ಆರ್‌ಪಿ ಪೊಲೀಸರು ಸಾಮೂಹಿಕ ರಜೆಯ ಮನವಿ ಸಲ್ಲಿಸಿಲ್ಲವೆಂಬ ಮಾಹಿತಿಯಿದ್ದು, ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಹಲವು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ದುಶ್ಚಟಗಳಿಂದ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News