ಭಟ್ಕಳ: ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲಾ ಪ್ರಾರಂಭೋತ್ಸವ
ಭಟ್ಕಳ, ಮೇ 31: ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ, ಶಿಕ್ಷಕರ ಪ್ರಯತ್ನದಿಂದ ಹಾಗೂ ಮಕ್ಕಳ ಶ್ರಮದಿಂದ ಶಾಲಾ ಫಲಿತಾಂಶ ಉತ್ತಮವಾಗಿದೆ ಎಂದರು. ಉತ್ತಮ ಪಲಿತಾಂಶವನ್ನು ತಂದು ಕೊಟ್ಟ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದವನ್ನು ಅಭಿನಂದಿಸಿದ ಅವರು ಮುಂದೆಯೂ ಕೂಡಾ ಇದೇ ರೀತಿಯ ಸಂಘಟಿತ ಪ್ರಯತ್ನ ಅಗತ್ಯ ಎಂದರು.
ಸರಕಾರದಿಂದ ಉಚಿತವಾಗಿ ನೀಡಿದ ಪಠ್ಯ ಪುಸ್ತಕವನ್ನು ಮಕ್ಕಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಸದಸ್ಯ ತಿಮ್ಮಪ್ಪ ನಾರಾಯಣ ಹೊನ್ನಿಮನೆ ಮಾತನಾಡಿ, ವಿದ್ಯೆಯು ಇಂದು ಅತ್ಯಂತ ಅವಶ್ಯಕವಾಗಿದ್ದು ಪ್ರತಿಯೊರ್ವ ವಿದ್ಯಾರ್ಥಿಯೂ ಕೂಡಾ ತನ್ನ ಓದು-ಬರಹದ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕಲ್ಲದೇ ಸಮಾಜದ ಸುಧಾರಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯ ಮಾದೇವ ಗೋವಿಂದ ಮೊಗೇರ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಕೆ.ಬಿ. ಮಡಿವಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಅಶೋಕ ಟಿ ನಾಯ್ಕ ನಿರೂಪಿಸಿದರು. ವಿ.ಟಿ.ಗುಬ್ಬುಹಿತ್ಲು ವಂದಿಸಿದರು.