ಹಿರಿಯ ಸಾಹಿತಿ ಡಾ. ದೇ.ಜವರೇಗೌಡ ನಿಧನಕ್ಕೆ ಸಂತಾಪ
ಹಾಸನ, ಜೂ.1: ಹಿರಿಯ ಸಾಹಿತಿ ಡಾ. ದೇ.ಜವರೇಗೌಡ ನಿಧನಕ್ಕೆ ಶ್ರವಣಬೆಳಗೊಳ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶೋಕ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಕವಿ ಕುವೆಂಪುರವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿಯೇ ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು.
ಕುವೆಂಪುರವರ ಮಾನಸ ಪುತ್ರರೆಂದೇ ಪ್ರಖ್ಯಾತರಾಗಿದ್ದ ದಿವಂಗತರು ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕೆಂಬ ಮಹಾತ್ವಾಕಾಂಕ್ಷೆ ಹೊಂದಿದ್ದರು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವಲ್ಲಿ ಉಪವಾಸ ಸತ್ಯಾಗ್ರಹ ಮಾಡಿದವರು. ಕನ್ನಡ ಆಡಳಿತ ಭಾಷೆಯಾಗಬೇಕು. ಕನ್ನಡಿಗರು ಚೈತನ್ಯಭರಿತರಾಗಿ ರಾಷ್ಟ್ರದಲ್ಲಿ ತಲೆಯೆತ್ತಿ ಮೆರೆಯಬೇಕು ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕು ಎಂಬ ಹಂಬಲವನ್ನು ಹೊಂದಿದ್ದರು. ಕನ್ನಡ ಜೈನ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅವರಿಗೆ ಸಲ್ಲೇಖನಾ ವಿಧಿಯಿಂದ ಸಮಾಧಿ ಮರಣ ಹೊಂದುವ ಅಭಿಲಾಷೆಯಿತ್ತು.
ಹಿರಿಯರ ಅಕಾಲಿಕ ನಿಧನದಿಂದ ಕುಟುಂಬ ಹಾಗೂ ಕನ್ನಡ ರಾಜ್ಯಕ್ಕೆ ಅಪಾರ ದುಃಖವಾಗಿದೆ. ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸಿದ್ದಾರೆ.