ಶಿಕ್ಷಣದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬನ್ನಿ: ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್
ಮಡಿಕೇರಿ, ಜೂ.1: ವಿದ್ಯೆ ಕಸಿದುಕೊಳ್ಳಲಾಗದ ಆಸ್ತಿಯಾಗಿರುವುದರಿಂದ ಪ್ರತಿಯೊಂದು ಸಮುದಾಯ ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕೆಂದು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಕರೆ ನೀಡಿದ್ದಾರೆ.
ನಗರದ ಮೇಲಿನ ಗೌಡ ಸಮಾಜದಲ್ಲಿ ನಡೆದ ಮಡಿಕೇರಿ ತಾಲೂಕು ಸವಿತಾ ಸಮಾಜದ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲವನ್ನೂ ಕಸಿದುಕೊಳ್ಳ ಬಹುದು, ಆದರೆ ವಿದ್ಯೆಯನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಈ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಬೇಕಾದರೆ ಪ್ರತಿಯೊಬ್ಬರು ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಕರೆ ನೀಡಿದರು. ಶಿಕ್ಷಣದಿಂದ ಮಾತ್ರ ಒಂದು ಸಮುದಾಯ ಅಭಿವೃದ್ಧಿಯನ್ನು ಹೊಂದಲು ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.
ಮೈಸೂರು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜು ಮಾತನಾಡಿ, ಸಮಾಜದ ಬಂಧುಗಳು ಶಿಕ್ಷಣ ಹಾಗೂ ಸಂಘಟಿತ ಹೋರಾಟದ ಮೂಲಕ ಅಭ್ಯುದಯವನ್ನು ಸಾಧಿಸಬೇಕೆಂದು ಕರೆ ನೀಡಿದರು. ಸವಿತಾ ಸಮಾಜ ಹಿಂದುಳಿಯಲು ಶಿಕ್ಷಣದ ಕೊರತೆಯೇ ಕಾರಣವೆಂದು ಅಭಿಪ್ರಾಯಪಟ್ಟ ಅವರು, ವಿದ್ಯೆಯನ್ನು ಕಡೆಗಣಿಸಿದಲ್ಲಿ ಸರಕಾರ ಹಾಗೂ ಸಮಾಜದಿಂದ ದೊರೆಯುವ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಹಾಗೂ ಸವಿತಾ ಸಮಾಜದ ಹಿರಿಯರನ್ನು ಇದೇ ಸಂದರ್ಭ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. 2014-15ನೆ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಸಮಾಜ ಬಾಂಧವರ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕೊಡಗು ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮೈಸೂರು ಜಿಲ್ಲಾ ಪ್ರತಿನಿಧಿ ನಾಗೇಶ್, ಸಂಘಟನಾ ಕಾರ್ಯದರ್ಶಿ ಭರತ್, ಸವಿತಾ ಸಮಾಜದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರಾಧಾ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.